2ಎ ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲದು
ಸಂಜೆವಾಣಿ ವಾರ್ತೆ
ಕೆಂಭಾವಿ:ಫೆ.28:ಬಹುದಿನದ ಬೇಡಿಕೆಯಾದ ರೈತ ಸಮುದಾಯವಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು. ಯಾವದೆ ಪಕ್ಷದ ಸರಕಾರ ಬಂದರೂ ನಾವು ಎದೆಗುಂದದೆ ಹೋರಾಟ ನಡೆಸುತ್ತೆವೆ ಎಂದು ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸೊನ್ನದ ಬಡಾವಣೆಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 3 ವರ್ಷಗಳಿಂದ ಸತತವಾಗಿ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೆವೆ. ಎರಡು ಸರಕಾರಗಳು ಬದಲಾದವು, ಮೂರು ಮುಖ್ಯಮಂತ್ರಿಗಳು ಬದಲಾದರೂ ನಮ್ಮ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ.
ಎಲ್ಲ ಮುಖ್ಯಮಂತ್ರಿಗಳು ಕೇವಲ ಮಾಡುತ್ತೆವೆ, ನೋಡುತ್ತೆವೆ ಎನ್ನುವದಕ್ಕೆ ಸೀಮಿತವಾಗಿದ್ದಾರೆ. ನಮ್ಮ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮೀಸಲಾತಿಯಿಂದ ಸಾಕಾಷ್ಟು ಲಾಭ ದೊರೆಯುತ್ತದೆ. ನಮ್ಮ ಮೀಸಲಾತಿ ಹೋರಾಟದಿಂದಲೆ ಅಧಿಕಾರಕ್ಕೆ ಬಂದ ಸರಕಾರ, ಶಾಸಕರು, ಸಚಿವರುಗಳು ಮುಖ್ಯಮಂತ್ರಿಗಳ ಮುಂದೆ ಮಾತನಾಡುವದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಜೋರಾಗಿ ಮಾತನಾಡುತ್ತಿದ್ದವರೆಲ್ಲರೂ ಇಂದೂ ಮೌನಕ್ಕೆ ಶರಣಾಗಿದ್ದಾರೆ.
ಮಾ.2, ಶನಿವಾರದಂದು ಹುಣಸಗಿ ಪಟ್ಟಣದಲ್ಲಿ ಯಾದಗಿರಿ ಜಿಲ್ಲೆಯ ವತಿಯಿಂದ ಹೆದ್ದಾರಿಯಲ್ಲಿ ಲಿಂಗಪೂಜೆ ಮೂಲಕ ಪಂಚಮಸಾಲಿ ಬೃಹತ್ ಹೋರಾಟವನ್ನು ಮಾಡಲಾಗುವದು. ಮಾ.10 ರಂದು ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕ ಪಂಚಮಸಾಲಿಯ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವದು. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಪ್ರಮುಖರಾದ ಶರಣಪ್ಪ ಬಂಡೋಳಿ, ಬಸವರಾಜ ಅಂಗಡಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ, ಮುಖಂಡರಾದ ಸಂಗಣ್ಣ ತುಂಬಗಿ, ಬಸವರಾಜ ಮಲಗಲದಿನ್ನಿ, ಮುರೆಗೆಣ್ಣ ದೇಸಾಯಿ, ಭೀಮು ಮಲ್ಕಾಪುರ, ಶಿವಣ್ಣ ಬಳಬಟ್ಟಿ, ಈರಣ್ಣ ಸೊನ್ನದ, ರಮೇಶÀ ಸೊನ್ನದ, ಮಲ್ಲನಗೌಡ, ರಮೇಶ ತುಂಬಗಿ, ಭೋಗಪ್ಪ ಅಸ್ಕಿ, ಬಸವರಾಜ ಬೈಚಬಾಳ, ವೀರಣ್ಣ ಕಲಕೇರಿ, ಚೆನ್ನು ವಾಲಿ, ಚಂದ್ರು ಡೊಣ್ಣುರು, ಚಂದ್ರು ಮನಗೂಳಿ, ನಿಂಗಣ್ಣ ಅವಟಿ, ವೀರೇಶ ಮಲ್ಲಾ, ಸೋಮು, ಸಂತೋಷ, ಶಂಕರ ಬಿರಾದಾರ ಸೇರಿದಂತೆ ಇತರರಿದ್ದರು.
ನಮ್ಮ ಹೋರಾಟ ಯಾವದೇ ಪಕ್ಷದ ಪರ ಅಥವಾ ವಿರೋಧವಲ್ಲ. ಯಾರೆ ಸರಕಾರದಲ್ಲಿದ್ದರೂ ನಾವು ಅವರ ವಿರುದ್ಧ ಹೋರಾಡುತ್ತೆವೆ. ನಮ್ಮ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ರಾಜಕೀಯದವರು ಏನೆ ಮಾಡಿದರೂ ನಮ್ಮ ಹೋರಾಟ ನಿಲ್ಲುವದಿಲ್ಲ. ಪಂಚಮಸಾಲಿ, ದೀಕ್ಷಾ ಪಂಚಮಸಾಲಿಯನ್ನು ಪ್ರವರ್ಗ 2ಎ ಗೆ ಸೇರಿಸಬೇಕು ಹಾಗೂ ಕೇಂದ್ರದಲ್ಲಿ ವೀರಶೈವ ಲಿಂಗಾಯತವನ್ನು ಓಬಿಸಿ ವರ್ಗಕ್ಕೆ ಸೇರಿಸಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ.
ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ