5 ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ, ವ್ಯಾಪಾರಿ ಸಂಘದ ಬೆಂಬಲ, ಫೆ. 29 ಔರಾದ್ ಬಂದ್ ಗೆ ಕರೆ
ಸಂಜೆವಾಣಿ ವಾರ್ತೆ
ಔರಾದ್ :ಫೆ.28: ಪಟ್ಟಣದ ಹೃದಯ ಭಾಗದಲ್ಲಿರುವ ಅಮರೇಶ್ಚರ ದೇವಸ್ಥಾನದ ಬಳಿಯಲ್ಲಿರುವ ಹಿಂದೂಗಳ ರುದ್ರ ಭೂಮಿ ಅತಿಕ್ರಮಣ ತೆರವಿಗೆ ಆಗ್ರಹಿಸಿ ಇದೇ ಫೆ. 29ರಂದು ಔರಾದ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ವ್ಯಾಪಾರಿ ಒಕ್ಕೂಟದ ಸಂಘದ ಅಧ್ಯಕ್ಷ ಸಂದೀಪ ಮೀಸೆ ತಿಳಿಸಿದ್ದಾರೆ.
ಈ ಕುರುತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ 5 ದಿನಗಳಿಂದ ಕನ್ನಡ ಪರ ಸಂಘಟನೆಗಳು ಮತ್ತು ಹಿಂದೂಪರ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣೆ ನಡೆಸುತ್ತಿವೆ. ಆದರೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಡಲೇ ಅಧಿಕಾರಿಗಳು ಎಚ್ಚತ್ತುಕೊಂಡು ಅತಿಕ್ರಮಣವಾದ ರುದ್ರಭೂಮಿ ತೆರವುಗೊಳಿಸಬೇಕು. ಅಲ್ಲದೇ ಹೆಚ್ಚುವರಿಯಾಗಿ 10 ಎಕರೆ ಜಮೀನು ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿದರು.
ಸೋಮವಾರ ವಿವಿಧ ಸಂಘಟನೆಯ ಪದಾಧಿಕಾರಿಗಳು ಅಣಕು ಶವವಿಟ್ಟು ಬಾಜಾ ಭಂಜತ್ರಿಯೊಂದಿಗೆ ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರೇ, ಮಂಗಳವಾರ ಕಪ್ಪು ಪಟ್ಟಿ ಧರಿಸಿ 5 ದಿನ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.
ರುದ್ರಭೂಮಿಗಾಗಿ ಅಮರೇಶ್ವರ ದೇವಸ್ಥಾನದ ಬಳಿ 2 ಎಕರೆ 6 ಗುಂಟೆ ಜಮೀನಿದ್ದು, ಇದರಲ್ಲಿ 16 ಗುಂಟೆ ಜಮೀನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ, ಇರುವ ಸ್ಮಶಾನ ಭೂಮಿ ಸಾಲುತ್ತಿಲ್ಲ ಜನರಿಗೆ ತೊಂದರೆಯಾಗುತ್ತಿದೆ. ಅನೇಕರು ಮೃತಪಟ್ಟಿರುವ ವೇಳೆ ಅಂತ್ಯಸಂಸ್ಕಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಕಣ್ಣೀರು ಹಾಕಿದ್ದಾರೆ ಎಂದು ದೂರಿದರು. ಇದರಿಂದ ಪಟ್ಟಣದ ನಿವಾಸಿಗಳಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ, ಕೂಡಲೇ ಒತ್ತುವರಿ ಮಾಡಿಕೊಂಡಿರುವ ಜಮೀನು ಹಿಂಪಡೆಯುವ ಜತೆಗೆ ಹೆಚ್ಚುವರಿಯಾಗಿ ಹೊಸ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಡಿಸಿ ಗೋವಿಂದ ರಡ್ಡಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಮುಖರಾದ ಬಸವರಾಜ ದೇಶಮುಖ, ರೇವಣಪ್ಪ ಜ್ಯಾಂತೆ, ನಾಗರಾಜ ಉಪ್ಪೆ, ವಿಜಯಕುಮಾರ ನಿರ್ಮಳೆ, ಬಾಲರಾಜ ಎಂಡೆ, ವಿಶಾಲ್ ಉಪ್ಪೆ, ಸಂಜುಕುಮಾರ ನೌಬಾದೆ, ಅಂಬ್ರೆಸ್ ದೇಶಮುಖ, ಸಚಿನ ಗಿರಣೆ, ಶಿವಾನಂದ ಜಿರಗೆ, ಶರಣಪ್ಪ ಪಾಟೀಲ್, ಶಂಕು ನಿಶ್ಪತೆ, ಅನಿಲ ಹೇಡೆ, ರಾಜು ಎಡವೆ, ಆನಮಧ ಪಾಂಚಾಳ, ಆಕಾಶ ಎಡವೆ, ಅನಿಲ ದೇಶಪಾಂಡೆ, ಸಿದ್ದು ಚಾರೆ, ವಿರೇಶ ಕನಕೆ ಸೇರಿದಂತೆ ಅನೇಕರಿದ್ದರು.
ಒತ್ತುವರಿಯಾದ ರುದ್ರಭೂಮಿಯ ತನಿಖೆ ನಡೆಸಿ
ಪಟ್ಟಣದ ಅಮರೇಶ್ವರ ದೇವಸ್ಥಾನದ ಬದಿಯಲ್ಲಿರುವ ಹಿಂದೂ ರುದ್ರಭೂಮಿ ಅತಿಕ್ರಮಣ ತೆರವು ಮಾಡಬೇಕು ಮತ್ತು ರುದ್ರಭೂಮಿಯ 2.06 ಗುಂಟೆ ಜಮೀನು ಒತ್ತುವರಿ ತೆರವಿಗೆ ಸಹಕರಿಸಿದವರ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿತ್ಯ ನಿರಂತರವಾಗಿರಲಿದೆ.
ವೀರೇಶ ಅಲಮಾಜೆ
ಅಧ್ಯಕ್ಷರು, ಲಿಂಗಾಯತ ಸಮಾಜ ಯುವ ಸಂಘ ಔರಾದ್,
ಶÁಸಕರ ಕಣ್ಣಿಗೆ ಕಾಣದ ಹೋರಾಟ
ಪಟ್ಟಣದ ಹಿಂದೂ ರುದ್ರಭೂಮಿ ಅತಿಕ್ರಮಣ ತೆರವಿಗೆ ಆಗ್ರಹಿಸಿ ಸತತವಾಗಿ ಐದು ದಿನಗಳಿಂದ ವಿವಿಧ ಕನ್ನಡಪರ ಹಾಗೂ ಹಿಂದೂ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು ಸ್ಥಳಿಯ ಶಾಸಕರಿಗೆ ಕಾಣದೇ ಇರುವುದು ದುರದೃಷ್ಟಕರ ಸಂಗತಿ, ಹಲವು ಬಾರಿ ಮನವಿ ಮಾಡಿದರು ಸಹ ಕ್ರಮ ಕೈಗೊಳ್ಳಲಾಗುವುದು ಆಶ್ವಾಸನೆ ನೀಡುತ್ತಾರೆ. ಕೂಡಲೇ ಎಚ್ಚೆತ್ತುಕೊಂಡು ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಯಲಿದೆ.
ಅನಿಲ ಬೇಲೂರೆ
ಕರವೇ (ನಾರಾಯಣ ಗೌಡ ಬಣ) ತಾಲೂಕು ಅಧ್ಯಕ್ಷರು ಔರಾದ