ಮೋದಿ ಹೇಳಿಕೆಗೆ ಸಚಿವ ಸುರೇಶ್ ಆಕ್ಷೇಪ
ಕೋಲಾರ,ಸೆ,೧೬-ನಾಗಮಂಗಲ ಗಲಾಟೆಯನ್ನ ಹರಿಯಾಣ ಚುನಾವಣೆಯಲ್ಲಿ ಮಾತನಾಡುತ್ತಾರೆ ಅಂದರೆ ಇದಕ್ಕೇನು ಹೇಳೋಣ ನಾವು, ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಪ್ರಧಾನಿ ಮೋದಿಗೆ ಟಾಂಗ್ ನೀಡಿದರು.
ನಗರದ ಕನಕ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲ ಪ್ರಕರಣ ಅತಿ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತಿದೆ, ಹಿಂದೂ ಆಗಲಿ ಮುಸ್ಲಿಂ ಆಗಲಿ ಸೌಹಾರ್ದಯುತವಾಗಿರಬೇಕು, ಕ್ಷುಲ್ಲಕ ಕಾರಣಗಳಿಗೆ ಜಗಳವಾಡುವುದು ಸರಿಯಲ್ಲ ಇದರಲ್ಲಿ ಪ್ರಧಾನಿ ಮೋದಿ ಅವರಿಗೂ ಜವಬ್ದಾರಿ ಇರಬೇಕು ಎಂದು ಮೋದಿ ಹರಿಯಾಣ ಚುನಾವಣೆಯಲ್ಲಿ ನಾಗಮಂಗಲ ವಿಚಾರ ಪ್ರಸ್ತಾಪಕ್ಕೆ ಕಿಡಿಕಾರಿದರು.
ಶಾಸಕ ಮುನಿರತ್ನ ಧ್ವನಿ ಪರಿಶೀಲನೆ ಆಗಬೇಕು ಎಂಬ ಆರ್.ಅಶೋಕ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಆರ್.ಅಶೋಕ್ ಜೀವನದಲ್ಲಿ ಎಂದು ಸತ್ಯ ಮಾತನಾಡಿದವರಲ್ಲ, ಬಿಜೆಪಿ ಮಾಡುವುದು ಎಲ್ಲ ಸರಿ, ಕಾಂಗ್ರೆಸ್ ಮಾಡುವುದು ತಪ್ಪು ಎಂಬುದು ಅವರ ನಿರ್ಧಾರ, ಅಶೋಕ್ ಅವರಷ್ಟು ಬಾಲಿಷ ಹೇಳಿಕೆ ನೀಡುವವವರು ಕರ್ನಾಟಕದಲ್ಲಿ ಯಾರು ಇಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ, ಹಾಲಿನ ದರ ಏರಿಕೆ ಬಗ್ಗೆ ಸಿಎಂ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.