ಹಾಲು ದರ ಏರಿಕೆಗೆ ಸಹಮತ
ಕೋಲಾರ,ಸೆ,೧೬-ರಾಜ್ಯದಲ್ಲಿ ೫ ರೂಪಾಯಿ ಹಾಲಿನ ದರ ಏರಿಕೆ ಕುರಿತು ಸಿಎಂ ಸಿದ್ದರಾಮಯ್ಯ ಮುನ್ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ್ಯ, ಶಾಸಕ ಕೆ.ವೈ. ನಂಜೇಗೌಡ ಪ್ರತಿಕ್ರಿಯಿಸಿ ಹಾಲು ಒಕ್ಕೂಟ ಮತ್ತು ಹಾಲು ಸಹಕಾರ ಸಂಘಗಳಿಂದ ಸಿಎಂ ಅವರಿಗೆ ಹಾಲಿನ ದರ ಏರಿಕೆಗೆ ಸಲಹೆ ನೀಡಿದ್ದೇವೆಂದು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ರಾಮಸಂದ್ರ ಬಳಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಹಾಲಿನ ದರ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ, ಅದಕ್ಕಾಗಿ ಹಾಲಿನ ದರ ಏರಿಕೆ ಕುರಿತ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಮ್ಮ ಬೆಂಬಲವಿದೆ ಎಂದ ಅವರು ಹಾಲು ದರ ಏರಿಸಿ, ನೇರವಾಗಿ ರೈತರಿಗೆ ನೀಡಲು ನಿರ್ಧಾರ ಮಾಡಿದ್ದೇವೆ ಎಂದರು.
ಹಾಲು ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲ್ಲ ರೈತರ ಕಲ್ಯಾಣಕ್ಕೆ ಹಾಲು ದರ ಏರಿಸುವ ಅನಿವಾರ್ಯತೆ ಇದೆ ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ದರ ಏರಿಕೆ ಅವಶ್ಯಕತೆ ಇದೆ ಅದಕ್ಕಾಗಿ ನಾವು ಸಹ ಸಿಎಂಗೆ ಸಲಹೆ ನೀಡಿದ್ದೇವೆ ಎಂದರು.
ಬೇರೆ ರಾಜ್ಯದಲ್ಲಿ ಹಾಲು ದರಕ್ಕೂ ಕರ್ನಾಟಕ ರಾಜ್ಯದಲ್ಲಿ ಹಾಲು ದರಕ್ಕೆ ೮ ರೂಪಾಯಿ ವ್ಯತ್ಯಾಸವಿದೆ ಹಾಲು ಉತ್ಪಾದನೆಗೆ ವೆಚ್ಚ ಹೆಚ್ಚಾಗಿದ್ದು, ದರ ಏರಿಸಿದರೆ ರೈತರಿಗೆ ಅನುಕೂಲವಾಗಲಿದೆ. ವಿಪಕ್ಷಗಳು ಹಾಲು ದರ ಏರಿಕೆಗೆ ವಿರೋಧ ಮಾಡ್ತಿದ್ದಾರೆ ಎರಡು ತಿಂಗಳು ಮಾತ್ರ ಪ್ರೋತ್ಸಾಹ ಧನ ಬಾಕಿ ಇದೆ. ನಮ್ಮ ಸರ್ಕಾರ ರೈತರ ಪರವಾಗಿದೆ, ರೈತರನ್ನ ಪ್ರೋತ್ಸಾಹ ಮಾಡಲಿದೆ ಅದಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಆದರೆ ವಿಪಕ್ಷಗಳು ಮಾತ್ರ ಇದನ್ನ ಬಳಿಸಿಕೊಂಡು ಸರ್ಕಾರದ ವಿರುದ್ದ ಜನರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ದ ಬೇಸರ ವ್ಯಕ್ತಪಡಿಸಿದರು.