ಆಲೆಟ್ಟಿ ಕೃಷಿ ತೋಟಕ್ಕೆ ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ
ಸುಳ್ಯ:ಆಲೆಟ್ಟಿ ಗ್ರಾಮದ ವಿವಿಧ ಕಡೆಗಳಲ್ಲಿ ಹಲವು ದಿನಗಳಿಂದ ನಿರಂತರ ಆನೆ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಕೃಷಿ ನಾಶವಾಗಿದ್ದು ಈ ಪ್ರದೇಶಕ್ಕೆ ಸುಳ್ಯ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಲೆಟ್ಟಿ ಗ್ರಾಮದ ತುದಿಯಡ್ಕ, ಪಡ್ಡು ಕಳಗಿ ಗುಡ್ಡೆಮನೆ, ಚಳ್ಳಂಗಾರು ಭಾಗದಲ್ಲಿ ಕೆಲ ದಿನಗಳಿಂದ ಸುಮಾರು ೬ ರಿಂದ ೮ ಆನೆಗಳು ರಾತ್ರಿಯ ಸಮಯದಲ್ಲಿ ಬಂದು ಬಾಳೆ, ತೆಂಗು ಅಡಕೆ ಕೃಷಿಯನ್ನು ನಾಶಮಾಡಿವೆ.  ದಾಳಿ ಮಾಡುವ ಕಾಡಾನೆಗಳನ್ನು ದೂರ ಓಡಿಸಲು ಕೃಷಿಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ರಾತ್ರಿ ಸಮಯದಲ್ಲಿ ಬರುವ ಆನೆಗಳನ್ನು ಓಡಿಸಲು ಈಗಾಗಲೇ ಇಲಾಖೆ ಕಾರ್ಯಚರಣೆ ಮಾಡುತ್ತಿದ್ದು, ಆಗಿರುವ ಕೃಷಿ ನಾಶಕ್ಕೆ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸೋಲಾರ್ ಬೇಲಿ ಅಳವಡಿಸಲಾಗುವುದು. ತಮ್ಮ ಇಲಾಖೆಯ ವತಿಯಿಂದ ಸಿಗುವ ಎಲ್ಲಾ ಪರಿಹಾರ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಆಲೆಟ್ಟಿ ವಲಯದ ಫಾರೇಸ್ಟರ್ ವೆಂಕಟೇಶ್, ಕೃಷಿಕರಾದ ಕೃಪಾಶಂಕರ್ ತುದಿಯಡ್ಕ, ಆನಂದ ಗೌಡ ಗುಡ್ಡೆಮನೆ, ಲೊಲಾಜಾಕ್ಷ ಪಡ್ಡು, ಜಯಂತ ಪಡ್ಡು ಮತ್ತಿತರರು ಇದ್ದರು.