ರಾಷ್ಟ್ರದ ಅಭಿವೃದ್ಧಿಗೆ ಎನ್‍ಜಿಓಗಳ ಕೊಡುಗೆ ಅನನ್ಯ
ಕಲಬುರಗಿ:ಫೆ.27: ಕಲೆ, ಸಾಹಿತ್ಯ, ಪರಂಪರೆ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ನಿರುದ್ಯೋಗ ನಿವಾರಣೆ, ಶಿಕ್ಷಣ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ, ಸಾಮಾಜಿಕ ಜಾಗೃತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಎನ್‍ಜಿಓಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಕಾರ್ಯಗಳು ಸರ್ಕಾರದಿಂದಲೇ ಮಾಡುವುದು ಅಸಾಧ್ಯ. ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಉತ್ತಮವಾಗಿ ಕಾರ್ಯ ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನೇಕ ವರ್ಷಗಳಿಂದ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಎನ್ ಜಿಓ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿಗೆ ಸಂಬಂಧಿಸಿದಂತೆ ಇಚ್ಛಾಶಕ್ತಿಯ ಕೊರತೆಯಿರುವ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಅಭಿವೃದ್ಧಿಯ ಕೆಲಸವನ್ನು ಒಂದು ಸವಾಲಾಗಿ ತೆಗೆದುಕೊಂಡು ಕೆಲಸಮಾಡಬೇಕಾಗಿದೆ. ‘ರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ಎನ್‍ಜಿಓಗಳು ಕಂಡವು’ ಎಂಬ ಮಾತು ಎನ್‍ಜಿಓದ ಮಹತ್ವವನ್ನು ಸಾರುತ್ತದೆ. ಸಾಮಾಜಿಕ ಜಾಗೃತಿ, ಪ್ರತಿಶತ ಸಾಕ್ಷರತಾ ದರದ ಸಾಧನೆ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ, ದೀನ-ದಲಿತ, ಬಡವರು, ಅಸಹಾಯಕರು, ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ನಿರ್ಗತಿಕರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎನ್‍ಜಿಓಗಳು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಪೂಜಾ ಜಮಾದಾರ, ಪ್ರಮುಖರಾದ ಬೀರಣ್ಣ, ಸತೀಶ್, ಅಭಿಶೇಷ, ನಾಗರಾಜ, ಅಕ್ಷಯ ಸೇರಿದಂತೆ ಇನ್ನಿತರರಿದ್ದರು.