ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ಹಣವಿಲ್ಲ:ಶಾಸಕ ಅಲ್ಲಮಪ್ರಭು ಪಾಟೀಲ್
ಕಲಬುರಗಿ:ಫೆ.27:ಐದು ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ಹಣವಿಲ್ಲ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬಹಿರಂಗವಾಗಿಯೇ ಅಳಲು ತೋಡಿಕೊಂಡರು.
ನಗರದ ಉದನೂರು ರಸ್ತೆಯಲ್ಲಿರುವ ಜಾಧವ್ ಲೇಔಟ್‍ನ ಅಮೋಘನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶ್ರಮಶಕ್ತಿ, ಯುವ ನಿಧಿ ಹಾಗೂ ಅನ್ನಭಾಗ್ಯ ಮುಂತಾದ ಐದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 65000 ಕೋಟಿ ರೂ.ಗಳು ಖರ್ಚಾಗುತ್ತಿದೆ ಎಂದರು.
ಮಹಿಳೆಯರಿಗೆ ಪ್ರತಿ ತಿಂಗಳು 2000ರೂ.ಗಳು ಬರುತ್ತವೆ. ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಸಾರಿಗೆ ಬಸ್‍ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವು ಇಲ್ಲದಂತಾಗಿದೆ. ಹೀಗಾಗಿ ಕ್ಷೇತ್ರದ ಜನರಿಂದ ಬೈಸಿಕೊಳ್ಳುವಂತಹ ಪರಿಸ್ಥಿತಿ ನಮ್ಮ ಹಣೆಬರಹವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಏನೋ ಅಭಿವೃದ್ಧಿ ಕೆಲಸ ಮಾಡಬೇಕು ಎಂದುಕೊಂಡು ನಾನು ಕ್ಷೇತ್ರಕ್ಕೆ ಬಂದೆ. ಈಗ ನೋಡಿದರೆ ಎಲ್ಲ ಹಣವೂ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ. ಇಂತಹ ಮಾತುಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗುರ ಉಂಟಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಭೇಟಿ ಮಾಡಿ ಅಭಿವೃದ್ಧಿಗಾಗಿ ಅನುದಾನ ದೊರಕಿಸಿಕೊಳ್ಳುವ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ್ ನಗರ ಪೋಲಿಸ್ ಠಾಣೆಯ ಪಿಐ, ಸಂಘದ ಅಧ್ಯಕ್ಷ ಗುರುರಾಜ್ ಕುಲಕರ್ಣಿ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು.