ಕೂಡ್ಲಿಗಿ ಶಾಸಕರ ನೇತೃತ್ವದಲ್ಲಿ ಎರಡು ದಿನ ಸಂಭ್ರಮಿಸಿದ “ಗುಡೇಕೋಟೆ” ಐತಿಹಾಸಿಕ ಉತ್ಸವ
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಫೆ.27 :-  ಒನಕೆ ಓಬವ್ವನ ತವರೂರು, ಪಾಳೆಗಾರರ ಆಳ್ವಿಕೆಯ ನೆಲೆಬೀಡಾದ ಗುಡೇಕೋಟೆಯಲ್ಲಿ ಎರಡು ದಿನಗಳ ಕಾಲ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ನೇತೃತ್ವದಲ್ಲಿ  ಗುಡೇಕೋಟೆ ಉತ್ಸವವು ಹಬ್ಬದ ವಾತಾವರಣದಂತೆ ಸಡಗರ ಸಂಭ್ರಮದಲ್ಲಿ   ಕೊನೆ ದಿನದ  ಸಮಾರೋಪ ಕಾರ್ಯಕ್ರಮ ಹಾಗೂ ಉತ್ಸವದ ತೆರೆ ಕಂಡಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿದ  ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲೂಕಿನ ಮನೆ ಮಗಳಾದ ಒನಕೆ ಓಬವ್ವನ ಸ್ಮರಣೆ, ಪಾಳೇಗಾರರ ಆಡಳಿತದ ಗತ ವೈಭವದ ಮೆಲುಕು ಹಾಕುವಂಥ ಐತಿಹಾಸಿಕ ಗುಡೇಕೋಟೆ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿರುವುದು ಅತೀವ ಸಂತಸ ತಂದಿದೆ. ಈ ಉತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರಲ್ಲದೆ, ಸ್ಥಳೀಯರು ಸೇರಿ ನಾಡಿನ ಕಲಾ ತಂಡಗಳ ಕಲರವಕ್ಕೆ ಇದೊಂದು ಸಾಕ್ಷಿಯಾಯಿತು. ಇಂಥ ಅರ್ಥಪೂರ್ಣ ಉತ್ಸವ ಆಚರಣೆಗೆ 30 ಲಕ್ಷ ರೂ. ನೀಡುವ ಮೂಲಕ ಪ್ರೋತ್ಸಾಹ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರ ಸಹಕಾರ ನೀಡಿದ್ದು, ಮುಂದಿನ ವರ್ಷಗಳಲ್ಲಿ ಈ ಉತ್ಸವ ಜನರ ಉತ್ಸವವಾಗಿಸಲು ಶ್ರಮಿಸಲಾಗುವುದು. ಒನಕೆ ಓಬವ್ವನ ವಂಶಸ್ಥರು ಹಾಗೂ ಜರಿಮಲೆ ರಾಜ ವಂಶಸ್ಥರಿಗೆ ಸರಕಾರದಿಂದ ನೆರವು ದೊರಕಿಸಲಾಗುವುದು ಎಂದು ತಿಳಿಸಿದರು.
ಸಮಾರೋಪ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ   ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನದ ಸಿದ್ದಯ್ಯನಕೋಟೆ ಶಾಖಾಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಕೂಡ್ಲಿಗಿ ಮತ್ತು ಮೊಳಕಾಲ್ಮೂರು ತಾಲೂಕುಗಳು ಹಿಂದುಳಿದಿವೆ. ಹಾಗಾಗಿ, ಶಿಕ್ಷಣದ ಮೂಲಕ ಅಭಿವೃದ್ಧಿಯತ್ತ ಸಾಗಬೇಕು. ಪ್ರಮಾಣಿಕ ಸೇವೆಯ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮರಂತೆ ಮಕ್ಕಳನ್ನು ಬೆಳೆಸಬೇಕಿದೆ. ಕೂಡ್ಲಿಗಿ ಕ್ಷೇತ್ರದ ಶಾಸಕರ ಶಕ್ತಿ, ಅವಿರತ ಶ್ರಮ ಮತ್ತು ಬದ್ಧತೆಯೇ ಗುಡೇಕೋಟೆ ಉತ್ಸವ ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದ ಅವರು ಮಕ್ಕಳಿಗೆ  ತಪ್ಪದೆ ಶಿಕ್ಷಣ ಕಲಿಸಿ ಎಂದು ಪಾಲಕ ಪೋಷಕರಿಗೆ ಕಿವಿ ಮಾತು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ಗುಡೇಕೋಟೆ ಉತ್ಸವವು ಹಂಪಿ ಉತ್ಸವದ ಮಾದರಿಯಲ್ಲಿ ನಡೆದಿದೆ. ಸಮಾಜದ ಒಳಿತು ಬಯಸುವವರು, ತಂದೆ- ತಾಯಿಗಳ ಸೇವೆ ಮಾಡವವರಿಗೆ ಒಳ್ಳೆಯದೇ ಆಗಲಿದೆ. ಪುಸ್ತಕ, ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಿ, ಮೊಬೈಲ್ ಹವ್ಯಾಸ ತ್ಯಜಿಸುವುದು ಎಲ್ಲರ ಜವಾಬ್ದಾರಿ. ಸಂಸ್ಕಾರವಂತ ಕುಟುಂಬದಲ್ಲಿ ಜನಿಸಿದ ಡಾ.ಎನ್.ಟಿ.ಶ್ರೀನಿವಾಸ್ ಅವರು ನ್ಯಾಯದ ಮಾರ್ಗದಲ್ಲಿ ನಡೆಯುತ್ತಿದ್ದು, ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ. ಒನಕೆ ಓಬವ್ವನ ಇತಿಹಾಸ ಪ್ರಜ್ವಲಿಸುವಂತೆ ಮಾಡಬೇಕಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣವರ್ ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ವೈ.ರವಿಕುಮಾರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಗುಡೇಕೋಟೆ ರಾಜವಂಶಸ್ಥ ಶಿವರಾಜ ವರ್ಮ, ಜರಿಮಲೆ ರಾಜವಂಶಸ್ಥ ಕೃಷ್ಣರಾಜ ವರ್ಮ, ಮುಖಂಡರಾದ ಎನ್.ಟಿ.ತಮ್ಮಣ್ಣ, ಗುಂಡುಮುಣುಗು ಎಸ್.ಪಿ.ಪ್ರಕಾಶ್, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ದಿನ್ನೆ ಮಲ್ಲಿಕಾರ್ಜುನ, ಗುಡೇಕೋಟೆ ಗೌಡ್ರು ಶಿವಪ್ರಸಾದ , ಕೆ.ಎಂ.ಶಶಿಧರ, ನಿವೃತ್ತ ಇಒ ಜಿ.ಎಂ.ಬಸಣ್ಣ, ಕೆಇಬಿ ಗೋವಿಂದ,ನರಸಿಂಹಗಿರಿ  ಹುಬ್ಬಳ್ಳಿ ವೆಂಕಟೇಶ್, ಮಡಿವಾಳ ಮಾರೇಶ್, ಎನ್.ವಿ.ತಮ್ಮಣ್ಣ,  ಹಾರಕಬಾವಿ ಮಹಾಲಿಂಗಪ್ಪ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಬನಹಳ್ಳಿ ಮಾರಪ್ಪ, ಕಾನಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಕರವೇ ಹೋಬಳಿ ಅಧ್ಯಕ್ಷ ಶಿವಕುಮಾರ, ಸಿಪಿಐ ಸುರೇಶ್ ತಳವಾರ ಸೇರಿ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಮೌನಾಚರಿಸಲಾಯಿತು.ಎರಡು ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಸುಕಿನವರೆಗೂ ನಡೆದರು ನೆರೆದ ಜನಸ್ತೋಮ ಕಾರ್ಯಕ್ರಮದ ವೀಕ್ಷಣೆ  ಮಾಡಿ ಸಂಭ್ರಮಿಸಿದರು ಗುಡೇಕೋಟೆ ಉತ್ಸವಕ್ಕೆ ಮೆರಗು ತಂದರು.