ಸಾಂಸ್ಕೃತಿಕ ಜ್ಞಾನ ಸಾಮಾನ್ಯ ಜ್ಞಾನವನ್ನು ಆಳುತ್ತಿದೆ : ಡಾ. ಎಂ. ಎಸ್. ಮೂರ್ತಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ27: ಸಂಸ್ಕೃತಿಯ ಜ್ಞಾನದ ಮೂಲ ಮಾತು ಮತ್ತು ಅಕ್ಷರ. ಅಕ್ಷರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದೇವೆ, ಬದುಕಿನಲ್ಲಿ ಯಾವುದು ಕೂಡ ಹೆಚ್ಚಾಗಬಾರದು. ಅಕ್ಷರವು ಸಮಾಜದ ನೆಮ್ಮದಿ ಹಾಗೂ ಶಾಂತಿಯನ್ನು ಕದಡುತ್ತಿದೆ. ಅಕ್ಷರಕ್ಕೂ ಮೊದಲು ಜನರ ಸಂಸ್ಕೃತಿ ಬದುಕುಳಿದಿದ್ದು, ಪ್ರಸ್ತುತ ಸಂಸ್ಕೃತಿ ಕಲುಶಿತವಾಗುವ ನಿಟ್ಟಿನಲ್ಲಿ ಸಾಗುತ್ತಿದ್ದು, ಅಕ್ಷರ ಜ್ಞಾನವು ಅನುಭವದ ಸಾರವು ಮೀರಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ಎಂ. ಎಸ್. ಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯು.ಜಿ.ಸಿ. ಪಿ.ಎಚ್.ಡಿ. 4ನೇ ಹಂತದ ಕೋರ್ಸ್‍ವರ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಅಕ್ಷರಕ್ಕಿಂತ ಮೊದಲು ಜನಸಾಮಾನ್ಯರ ಬದುಕುವ ಸಂಸ್ಕೃತಿ ವಿಶಾಲವಾಗಿತ್ತು. ನಾವು ಅದನ್ನು ಸೀಮಿತ ಚೌಕ್ಕಟ್ಟಿನಲ್ಲಿ ನೋಡಬಾರದು. ನಮ್ಮ ಜನಪದರು ನಾಡಿನ ಜ್ಞಾನ ಸಂಪತ್ತಿಗೆ ಹೆಚ್ಚು ಕೊಡುಗೆಯನ್ನು ನೀಡಿದ್ದಾರೆ. ವಿಜ್ಞಾನಕ್ಕೆ ಪುರಾವೆಗಳು ಬೇಕು, ಆದರೆ ಒಂದು ಸಂಸ್ಕೃತಿ ಜನಪದರ ಕಲೆ ಅವರ ಬದುಕನ್ನು ಪುರಾವೆ ಮೂಲಗಳಿಂದ ಅಳೆಯಲು ಸಾಧ್ಯವಿಲ್ಲ. ಸಂಕೀರ್ಣವಾದ ಸನ್ನಿವೇಶದ ನೆಲೆಯಲ್ಲಿ ಸಂಶೋಧನೆಗಳು ನಡೆಯಬೇಕಿದೆ, ವೈಯಕ್ತಿಕ ಲಾಭಕ್ಕಾಗಿ ಅಧ್ಯಯನ ಮಾಡಬಾರದು ಸಮಾಜದ ಸಂಸ್ಕೃತಿ, ಕಲೆ, ಹಾಗೂ ಜನಸಾಮಾನ್ಯರ ಬದುಕಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಬೇಕು ಎಂದರು.
ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಲೆಯನ್ನು ಸೀಮಿತ ಕ್ಷೇತ್ರದಿಂದ ಅಧ್ಯಯನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಇದನ್ನು ನಾವು ಅಧ್ಯಯನ ಶಿಸ್ತಾಗಿ ನೋಡಬೇಕಾಗಿದೆ. ಇಂದಿನ ಆಧುನಿಕ ದಿನಗಳಲ್ಲಿ ಕಲೆ ಹಾಗೂ ಸಂಸ್ಕೃತಿ ನಶಿಸಿ ಹೋಗುತ್ತಿದ್ದು ಆದರೆ ಕನ್ನಡ ವಿಶ್ವವಿದ್ಯಾಲಯವು ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ ಅದನ್ನು ಬೆಳೆಸಿಕೊಂಡು ಹೋಗುತ್ತಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆವಹಿಸಿ ಮಾತನಾಡುತ್ತ ಅಕ್ಷರ ಬಂದ ಮೇಲೆ ಸಂಸ್ಕೃತಿ ತಿರಸ್ಕರಿಸುವ ಕ್ರಿಯೆ ಪ್ರಾರಂಭವಾಯಿತು. ಕಲಾ ಪ್ರಕಾರಗಳು ಭಾಷಾ ಹಾಗೂ ಅಕ್ಷರಗಳನ್ನು ಮೀರಿದ್ದು. ಚಿತ್ರಕಲೆಯಲ್ಲಿ ವ್ಯಾಕರಣಗಳನ್ನು ಹುಡುಕುವ ಪ್ರಯತ್ನವಾಗಬೇಕು. ಸಂಶೋಧನೆಯಲ್ಲಿ ಏಕಮುಖಿ ಸಂಚಾರ ಸಾಲದು ಬಹುಮುಖಿಯ ಸಂಚಾರವಾಗಬೇಕಿದೆ ಎಂದರು.
ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಸ್ವಾಗತಿಸಿದರು, ಸಂಗೀತ ಮತ್ತು ನೃತ್ಯ ವಿಭಾಗದ ಉಪನ್ಯಾಸಕರಾದ ಎಂ. ಜ್ಯೋತಿ ಅವರು ನಿರೂಪಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.