ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ರವರ 94ನೇ ಹುತಾತ್ಮ ದಿನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.27: ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಇಂದು ಸ್ವಾತಂತ್ರ್ಯ ಸಂಗ್ರಾಮದ ರಾಜಿ ರಹಿತ ಕ್ರಾಂತಿಕಾರಿ ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ಅವರ ಹುತಾತ್ಮ ದಿನವನ್ನು ವಿದ್ಯಾರ್ಥಿಗಳಿಂದ ಆಚರಿಸಲಾಯಿತು.
ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಕೆ.ಈರಣ್ಣ ಮಾತನಾಡಿ, ಚಂದ್ರಶೇಖರ್ ಆಜಾದ್ ಅವರು ತನ್ನ 14ನೇ ವಯಸ್ಸಿನಲ್ಲಿಯೇ ಭಾರತ ದೇಶವನ್ನು  ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಸ್ವತಂತ್ರ ಭಾರತದ ಕನಸಿನೊಂದಿಗೆ ಅವರ ವಿರುದ್ದ ಹೋರಾಡುತ್ತಲೇ, 1931 ಫೆಬ್ರವರಿ 27ರಂದು ತನ್ನ 24 ನೇ ವಯಸ್ಸಿನಲ್ಲಿಯೇ ಹುತಾತ್ಮ ರಾದರು. ದೇಶದ ಸ್ವಾತಂತ್ರ್ಯಕ್ಕಾಗಿ ಮಿಡಿದ ಈ ಯುವ ಕ್ರಾಂತಿಕಾರಿಯ ಜೀವನ ಹೋರಾಟದ ಸ್ಪೂರ್ತಿಯು ಇಂದಿಗೂ ಅಜರಾಮರ. ಅಜಾದ್ ಅವರಿಗೆ ಸ್ವಾತಂತ್ರ್ಯ ತಂದು ನಮ್ಮ ದೇಶದ ಜನತೆ ಶೋಷಣೆ ಮುಕ್ತ ಸಮಾಜದ ಕನಸು ಹೊತ್ತುಕೊಂಡಿದ್ದರು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಇವತ್ತಿಗೂ ನಮ್ಮ ದೇಶದಲ್ಲಿ ಶಿಕ್ಷಣ ಖಾಸಗೀಕರಣ, ನಿರುದ್ಯೋಗ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ನಿಲ್ಲುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ವಿಚಾರ ಮೈಗೂಡಿಸಿಕೊಂಡು ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಉಪಾಧ್ಯಕ್ಷರು ಎಂ.ಶಾಂತಿ, ಉಮಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.