ದುಶ್ಚಟಕ್ಕೆ ಕಳವು ಇಬ್ಬರು ಸೆರೆ ೬೮ ಮೊಬೈಲ್ ಜಪ್ತಿ
ಬೆಂಗಳೂರು,ಫೆ.೨೭-ಒಂಟಿಯಾಗಿ ಓಡಾಡುವವರ ಹಿಂಬಾಲಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿರುವ ಮಹದೇವಪುರ ಪೊಲೀಸರು ೬೮ ಮೊಬೈಲ್ ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ರಂಗನಾಥ್ (೩೩) ಹಾಗೂ ಗಿರೀಶ್ (೨೩)ಬಂಧಿತ ಆರೋಪಿಗಳಾಗಿದ್ದು,ಅವರಿಂದ
೨೦ಲಕ್ಷ ಮೌಲ್ಯದ ೬೮ ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ. ಮಹದೇವಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂದಿನಿಂದ ಬೈಕ್‌ನಲ್ಲಿ ಹಿಂಬಾಲಿಸಿ ಅವರ ಮೊಬೈಲ್ ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಮಹದೇವಪುರ ಪೊಲೀಸ್ ಠಾಣೆಯ ಒಟ್ಟು ೯ ಮೊಬೈಲ್ ರಾಬರಿ ಪ್ರಕರಣಗಳು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ಕೈಕೊಳ್ಳಲಾಗಿದೆ.
ಆರೋಪಿಗಳು ಜನನಿಬೀಡ ಪ್ರದೇಶಗಳಾದ ಟಿನ್ ಪ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್ ಮುಂತಾದ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಒಂಟಿ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಅವರುಗಳಿಂದ ಮೊಬೈಲ್ ಕಿತ್ತುಕೊಂಡು ಅವುಗಳನ್ನು ತಮ್ಮ ಸ್ವಂತ ಊರು ಹಿರಿಯೂರಿನಲ್ಲಿ ಮಾರಾಟ ಮಾಡಿ ಬಂದ ಹಣದಿಂದ ಅವರುಗಳ ದುಶ್ಚಟಗಳಿಗೆ ಬಳಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಡಾ|ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ
ಕನ್ನಗಳ್ಳನ ಸೆರೆ:
ಕನ್ನ ಕಳವು ಮಾಡುತ್ತಿದ್ದ ಸಿವಿರಾಮನ್ ನಗರದ ಗುರುಪ್ರಸಾದ್ ಸಾಹೊ ನನ್ನು ಬಂಧಿಸಿರುವ ಬೈಯಪ್ಪನಹಳ್ಳಿ ಪೊಲೀಸರು
೭,೭೮,೮೦೦ ರೂ ಮೌಲ್ಯದ ೧೩೨ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಫೆ.ರಂದು ರಾತ್ರಿ ಬೈಯಪ್ಪನಹಳ್ಳಿಯ
ಮನೆಯೊಂದರ ಬಾಗಿಲನ್ನು ಮುರಿದು ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಬಂಧನದಿಂದ ಬೈಯಪ್ಪನಹಳ್ಳಿ, ಹೆಣ್ಣೂರಿನ ತಲಾ ಒಂದು ಕನ್ನ ಕಳವು ಪ್ರಕರಣ, ಬಾಣಸವಾಡಿ ಹಾಗೂ ಹೆಚ್.ಎ.ಎಲ್ ಪೊಲೀಸ್ ಠಾಣೆಯ ಎರಡು ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ
ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ .ಟಿ.ರಂಗಪ್ಪ ರವರ ನೇತೃತ್ವದಲ್ಲಿ ಬೈಯಪ್ಪನಹಳ್ಳಿ ಪೊಲೀಸ್ ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮೊಬೈಲ್ ಫೋನ್‌ಗಳನ್ನು ಕಳವು ಮಾಡಿ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದ ಕಳ್ಳನಿಂದ ರಾಮಮೂರ್ತಿ ನಗರ ಪೊಲೀಸರು ವಶಪಡಿಸಿಕೊಂಡಿರುವ ಮೊಬೈಲ್‌ಗಳನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.