ಹಣ ದುರ್ಬಳಕೆ ಆರೋಪ ಮುಚ್ಚಿಹಾಕಲು ಪ್ರತಿಭಟನೆ
ಚಿಟಗುಪ್ಪಾ,ಫೆ.27:ತಮ್ಮ ಅಧಿಕಾರದ ಅವಧಿಯಲ್ಲಿ ಜರುಗಿದ ಹಣ ದುರ್ಬಳಕೆ ಆರೋಪಗಳನ್ನು ಮುಚ್ಚಿಹಾಕಲು ಕೆಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದು ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಹುನ್ನಾರವಾಗಿದ್ದು ಯಾವುದೇ ಕಾರಣಕ್ಕೂ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಬಾರದು ಎಂದು ತಾಲೂಕಿನ ಮಂಗಲಗೆ ಗ್ರಾಮ ಪಂಚಾಯತ್ ಸದಸ್ಯ ಮಕ್ಬೂಲ್ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯತಿಯ 15 ಅನುದಾನ ಸೇರಿದಂತೆ ಇತರ ಕಾಮಗಾರಿಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೂಕ್ತವಾಗಿ ಕಾಮಗಾರಿ ಕೈಗೊಳ್ಳದ ಪರಿಣಾಮ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆಯಾಗಿದೆ.ಹೆಚ್ಚೇನೂ ಅರಿಯದ ಗ್ರಾಮ ಪಂಚಾಯತ್ ಸದಸ್ಯರನ್ನು ಈ ಅವ್ಯವಹಾರಗಳಲ್ಲಿ ಶಾಮೀಲು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಜಿಲ್ಲೆಗೆ ಹೊಸದಾಗಿ ಬಂದ ಸಿ ಇ ಒ ಎಲ್ಲ ಗ್ರಾಮ ಪಂಚಾಯತಿ ಕಾಮಗಾರಿಗಳ ಲೆಕ್ಕಪತ್ರವನ್ನು ಕೇಳುತ್ತಿದ್ದಾರೆ, ಇದು ಅವರ ಕರ್ತವ್ಯವೂ ಹೌದು, ಹಣ ದುರ್ಬಳಕೆ ಮಾಡಿಕೊಂಡ ಪಿ ಡಿ ಒ ಗಳಿಗೆ ಹೆದರಿಕೆ ಶುರುವಾಗಿದ್ದು ಯಾವುದೋ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಎಲ್ಲ ಪಿಡಿಒಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ. ಜನರ ತೆರಿಗೆ ಹಣ ಕೊಳ್ಳೆ ಹೊಡೆಯುವ ಗ್ರಾಪಂ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದಿದ್ದಾರೆ.