ಲೋಕಸಭೆ ಚುನಾವಣೆ ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಭಾರಿ ಕಸರತ್ತು:ಈ ಬಾರಿಯೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಜಿಗಜಿಣಗಿ ಘೋಷಣೆ- ಹೌಹಾರಿದ ಟಿಕೆಟ್ ಆಕಾಂಕ್ಷಿಗಳು
ರುದ್ರಪ್ಪ ಆಸಂಗಿ
ವಿಜಯಪುರ,ಫೆ.27:ಬರಲಿರುವ ವಿಜಯಪುರ ಲೋಕಸಭೆ ಎಸ್.ಸಿ. ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈ ಬಾರಿಯೂ ನಾನೇ ಎನ್ನುವ ಮೂಲಕ ಬಿಜೆಪಿಯಲ್ಲಿ ಟಿಕೆಟ್‍ಗಾಗಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿರುವ ಟಿಕೆಟ್ ಆಕಾಂಕ್ಷಿಗಳ ಆಸೆಗೆ ಸಂಸದ ರಮೇಶ ಜಿಗಜಿಣಗಿ ಅವರು ತಣ್ಣೀರು ಎರಚಿದ್ದಾರೆ.
ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ವಿಜಯಪುರ ಲೋಕಸಭೆ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಗೆಲವು ಸಾಧಿಸಿದ್ದಾರೆ. ಈಗ ಮತ್ರೆ ನಾಲ್ಕನೇ ಬಾರಿಯೂ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.
ಕಳೆದ ಆರೇಳು ತಿಂಗಳುಗಳಿಂದ ವಿಜಯಪುರ ಲೋಕಸಭೆ ಎಸ್.ಸಿ ಮೀಸಲು ಟಿಕೆಟ್‍ಗಾಗಿ ಬಿಜೆಪಿಯಲ್ಲಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆದಿದೆ. ಬಿಜೆಪಿಯಲ್ಲಿ ಬಂಜಾರಾ ಜನಾಂಗದ ಡಾ. ಬಾಬುರಾಜೇಂದ್ರ ನಾಯಿಕ, ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಮಹೀಂದ್ರ ನಾಯಿಕ ಅವರು ಈ ಬಾರಿ ಎಂ.ಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಬಿಜೆಪಿಯಲ್ಲಿ ಇನ್ನೂ ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರೂ ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಟಿಕೆಟ್ ಕಟ್ ಮಾಡಿ ತಾವೇ ಟಿಕೆಟ್ ಪಡೆಯಲು ಡಾ. ಬಾಬುರಾಜೇಂದ್ರ ನಾಯಿಕ, ಮಹೀಂದ್ರ ನಾಯಿಕ ಅವರ ಮಧ್ಯೆದಲ್ಲಿಯೇ ಭಾರಿ ಪೈಪೋಟಿ ನಡೆದಿದೆ. ಈ ಇಬ್ಬರು ಪ್ರಬಲ ಟಿಕೆಟ್ ಆಕಾಂಕ್ಷಿಗಳು ಬಂಜಾರಾ ಸಮುದಾಯಕ್ಕೇ ಸೇರಿರುವುದರಿಂದ ಜಿಗಜಿಣಗಿ ಅವರಿಗೆ ಟಕ್ಕರ್ ಕೊಡುವುದು ಕಷ್ಟವಾಗಿ ಇಬ್ಬರೂ ಟಿಕೆಟ್ ಆಕಾಂಕ್ಷಿಗಳು ಕೈ ಕೈ ಹಿಚುಕಿಕೊಳ್ಳುವಂತಾಗಿದೆ.
ಹಾಲಿ ಸಂಸದ ಜಿಗಜಿಣಗಿ ಅವರಿಗೆ ವಯಸ್ಸಾಗಿದೆ. ಈ ಬಾರಿ ಟಿಕೆಟ್ ತಪ್ಪುತ್ತದೆ ಎಂಬ ಕಾರಣಕ್ಕೆ ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಭಾರಿ ತುರುಸು ನಡೆದಿದೆ. ಅದೇ ಕಾರಣಕ್ಕಾಗಿ ಬಿಜೆಪಿಯಲ್ಲಿ ಡಾ. ಬಾಬುರಾಜೇಂದ್ರ ನಾಯಿಕ, ಮಹೀಂದ್ರ ನಾಯಿಕ ಅವರು ಏನೇಯಾಗಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದಾರೆ. ಎರಡ್ಮೂರು ಬಾರಿ ದೆಹಲಿಗೆ ತೆರಳಿ ವರಿಷ್ಠರ ಮನವೊಲಿಸಲು ತಿಣುಕಾಡುತ್ತಿದ್ದಾರೆ. ಇಬ್ಬರೂ ಪ್ರಬಲ ಆಕಾಂಕ್ಷಿಗಳಿಗೆ ನಿಮ್ಮ ತಯಾರಿಯಲ್ಲಿರಿ ಎಂದು ವರಿಷ್ಠರು ಹೇಳಿ ಕಳುಹಿಸಿದ್ದಾರೆ.
ಏತನ್ಮಧ್ಯೆ ವಿಜಯಪುರದಲ್ಲಿ ಹಾಲಿ ಸಂಸದ ಜಿಗಜಿಣಗಿ ಅವರು ಈ ಬಾರಿಯೂ ವಿಜಯಪುರ ಲೋಕಸಭೆ ಮೀಸಲು ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಬಹಿರಂಗ ಹೇಳಿಕೆ ನೀಡಿದ್ದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ. ಎಲ್ಲಿ ಕೊನೆಯ ಗಳಿಗೆಯಲ್ಲಿ ನಮಗೆ ಟಿಕೆಟ್ ಕೈ ತಪ್ಪಿ ಜಿಗಜಿಣಗಿ ಅವರಿಗೆ ಸಿಗುತ್ತಾ? ಎಂಬ ಆತಂಕ ಹೆಚ್ಚಾಗಿ ಇತರ ಟಿಕೆಟ್ ಆಕಾಂಕ್ಷಿಗಳಲ್ಲಿ ಎದೆ ಲಬ್‍ಡಬ್ ಬಡಿದುಕೊಂಡು ಆಕಾಂಕ್ಷಿಗಳ ಜಂಘಾಬಲವೇ ಉಡುಗಿದಂತಾಗಿದೆ. ವರಿಷ್ಠರು ಕೊನೆಯ ಗಳಿಗೆಯಲ್ಲಿ ಯಾರಿಗೆ ಟಿಕೆಟ್ ನೀಡುತ್ತಾರೆ ಎಂದು ಟಿಕೆಟ್ ಆಕಾಂಕ್ಷಿಗಳು ಉಸಿರು ಬಿಗಿ ಹಿಡಿದಿದ್ದಂತೂ ನಿಜ.