ಆರೋಗ್ಯದ ಮೇಲೆ ಸಕ್ರಿಯ ಗ್ಲಾಸ್ ಪರಿಣಾಮ ಮಾ.1ರಿಂದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ
ಕಲಬುರಗಿ:ಫೆ.27: ಆರೋಗ್ಯ ಮತ್ತು ಪರಿಸರದ ಮೇಲೆ ಸಕ್ರಿಯ ಗ್ಲಾಸ್ ಮತ್ತು ಸೆರಾಮಿಕ್ಸ್ ಪರಿಣಾಮ ಕುರಿತಂತೆ ಮಾರ್ಚ್ 1 ಹಾಗೂ 2ರಂದು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಚಾಲಕ ಹಾಗೂ ಹಿರಿಯ ವಿಜ್ಞಾನಿ ಪ್ರೊ.ಎಂ.ಎಸ್.ಜೋಗದ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂಡಿಯನ್ ಅಸೋಷಿಯೇಷನ್ ಆಫ್ ಫಿಸಿಕ್ಸ್ ಟೀಚರ್ಸ್ (ಐ.ಎ.ಪಿ.ಟಿ), ವಿಟಿಯು ಕಲಬುರಗಿ, ಮಟಿರಿಯಲ್ಸ್ ರೀಸರ್ಚ್ ಸೊಸೈಟಿ ಆಫ್ ಇಂಡಿಯಾ (ಎಂ.ಆರ್.ಎಸ್.ಐ), ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಕೆ.ಎಸ್.ಸಿ.ಎಸ್.ಟಿ), ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಸೇಷನ್ (ಡಿ.ಆರ್.ಡಿ.ಒ) ಆಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಈ ಸಮ್ಮೇಳನಕ್ಕೆ ಧಾರವಾಡ ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ಆರ್.ದೇಸಾಯಿ ಚಾಲನೆ ನೀಡಲಿದ್ದಾರೆ ಎಂದರು.
ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಮಟಿರಿಯಲ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ.ಅಶೋಕ್ ರಾಯಚೂರು, ಮುಂಬೈ ಬಾಬಾ ಅಟಾಮಿಕ್ ರೀಸರ್ಚ್ ಸೆಂಟರ್ ವಿಜ್ಞಾನಿ ಡಾ.ಜಿ.ಪಿ.ಕೋತ್ಯಾಳ್ ಸಮ್ಮೇಳನದ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಹೈಬ್ರಿಡ್ ಮೋಡ್‍ನಲ್ಲಿ ಫೆ.29ರಂದು ಎಸ್.ಬಿ.ಸೈನ್ಸ್ ಕಾಲೇಜಿನಲ್ಲಿ ಪೂರ್ವಭಾವಿ ಸಮ್ಮೇಳನ ನಡೆಯಲಿದ್ದು, ಬೆಂಗಳೂರು ಮತ್ತು ಮುಂಬೈನ ವಿಐಟಿಎಂ ಮಾಜಿ ನಿರ್ದೇಶಕ ಶಿವಪ್ರಸಾದ್ ಖೇಣಡ್ ಈ ಪೂರ್ವಭಾವಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಪ್ರೊ.ಜೋಗದ ಮಾಹಿತಿ ನೀಡಿದರು.
ಫೆ.29 ಒಳಗೊಂಡಂತೆ ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 30 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿದ್ದು, 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾನವ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಾಗುತ್ತಿದ್ದು, ಬಯೋಮೆಡಿಕಲ್ ಗ್ಲಾಸ್‍ಗಳು (ಗಾಜು), ಗ್ಲಾಸ್ ಸೆರಾಮಿಕ್ಸ್/ಸೆರಾಮಿಕ್ಸ್‍ನಿಂದ ವಿಕಿರಣ ಶೀಲ್ಡ್ ಗ್ಲಾಸ್‍ಗಳವರೆಗೆ ವಿವಿಧ ವಿಷಯಗಳ ಮೇಲೆ ಗಂಭೀರ ಚರ್ಚೆ ನಡೆಯಲಿದೆ. ಜರ್ಮನಿ, ಎಸ್ಟೋನಿಯಾ ಹಾಗೂ ಅಮೆರಿಕದ ತಜ್ಞರ ಆನ್‍ಲೈನ್ ಉಪನ್ಯಾಸಗಳು ಒಳಗೊಂಡಂತೆ 13 ಉಪನ್ಯಾಸಗಳು ಜರುಗಲಿದ್ದು, ಎಸ್.ಬಿ.ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳ ಪೂರ್ವಭಾವಿ ಸಮ್ಮೇಳನದಲ್ಲಿ ನಾಲ್ಕು ಉಪನ್ಯಾಸಗಳು ನಡೆಯಲಿವೆ ಎಂದು ಮಾಹಿತಿ ಹಂಚಿಕೊಂಡರು.
ವಿಟಿಯು ವಿಶೇಷ ಅಧಿಕಾರಿ ಡಾ.ಶಂಭುಲಿಂಗಪ್ಪ ಮಾತನಾಡಿದರು. ಡಾ.ಕೆ.ಶಿವರಾಮೇಗೌಡ, ಪ್ರೊ.ವೀರೇಶ್ ಪೂಜಾರಿ ಇದ್ದರು.