ಶಿವಮೊಗ್ಗ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ನಗರ ಹೆಸರಿಡಲು ಆಗ್ರಹ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಫೆ. 27: ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ದಿವಂಗತ ‘ಎಸ್.ಬಂಗಾರಪ್ಪ ನಗರ’ ಎಂದು ಹೆಸರಿಡಲು ಕ್ರಮಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆ ಆಡಳಿತಕ್ಕೆ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘ ಆಗ್ರಹಿಸಿದೆ.ಈ ಸಂಬಂಧ  ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಮಾಯಣ್ಣಗೌಡ ಅವರಿಗೆ ಸಂಘಟನೆ ಮನವಿ ಪತ್ರ ಅರ್ಪಿಸಿದೆ.ಬಡ – ಮಧ್ಯಮ ವರ್ಗದ ವಸತಿರಹಿತರಿಗೆ ಅನುಕೂಲ ಕಲ್ಪಿಸಿಕೊಡಲು, ಎಸ್.ಬಂಗಾರಪ್ಪ ಅವರು ಬೊಮ್ಮನಕಟ್ಟೆ ಆಶ್ರಯ ಬಡಾವಣೆ ರಚನೆಗೆ ಕ್ರಮಕೈಗೊಂಡಿದ್ದರು. ಪ್ರಸ್ತುತ ಸದರಿ ಬಡಾವಣೆಯಲ್ಲಿ 7 ಸಾವಿರ ಮನೆಗಳಿದ್ದು, 25 ರಿಂದ 30 ಸಾವಿರ ಜನಸಂಖ್ಯೆಯಿದೆ.ಇಲ್ಲಿಯವರೆಗೂ ಸದರಿ ಬಡಾವಣೆಗೆ ಯಾವುದೇ ಹೆಸರಿಟ್ಟಿಲ್ಲ. ಬಡಾವಣೆ ರಚನೆಗೆ ಮೂಲ ಕಾರಣಕರ್ತರಾದ ಎಸ್.ಬಂಗಾರಪ್ಪ ಅವರ ಸ್ಮರಣಾರ್ಥ, ಎಸ್.ಬಂಗಾರಪ್ಪ ನಗರ ಎಂದು ನಾಮಕರಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.