ಕಚೇರಿ ಮತ್ತು ಅಂಗಡಿ ಮುಗ್ಗಟ್ಟುಗಳ ನಾಮಫಲಕ ಕನ್ನಡ ಭಾಷೆಗೆ ಶೇ.60 ರಷ್ಟು ಕಡ್ಡಾಯ
ಭಾಲ್ಕಿ:ಫೆ.27: ಪಟ್ಟಣದ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯ ಅಂಗಡಿ ಮುಗ್ಗಟ್ಟು ಮತ್ತು ಸರ್ಕಾರಿ ಕಚೇರಿಗಳಲ್ಲಿಯ ನಾಮಫಲಕಗಳಿಗೆ 60% ಸ್ಥಳ ಕಡ್ಡಾಯಗೊಳಿಸಲು ಫೆ.29 ಕೊನೆಯ ದಿನವಾಗಿದೆ. ಎಲ್ಲರೂ ತಕ್ಷಣವೇ ತಮ್ಮ ನಾಮ ಫಲಕಗಳಿಗಳಲ್ಲಿ ಪ್ರಥಮಾದ್ಯತೆ ನೀಡಬೇಕು ಎಂದು ತಹಸೀಲ್ದಾರ ಶ್ರೀಯಾಂಕಾ ಧನಾಶ್ರಿ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಕರೆದ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಅಂಗಡಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಎಲ್ಲಾ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಮ್ಮ ಅಂಗಡಿಗಳಲ್ಲಿ ಕನ್ನಡ ನಾಮಫಲಕಕ್ಕೆ ಪ್ರಥಮಾದ್ಯತೆ ನೀಡಬೇಕು. ಗಡಿ ತಾಲೂಕು ಭಾಲ್ಕಿಯಲ್ಲಿ ಎಲ್ಲಾ ಭಾಷೆಗಳ ನಾಮಫಲಕಗಳಿವೆ ಅವುಗಳಲ್ಲಿ ಕನ್ನಡ ಭಾಷೆಗೆ 60% ಸ್ಥಳಾವಕಾಶ ಮಾಡಿಕೊಟ್ಟು, ಉಳಿದ 40% ಸ್ಥಳದಲ್ಲಿ ಇತರೆ ಭಾಷೆಯಲ್ಲಿ ಬರೆಯಬಹುದು. ಈ ರೀತಿಯ ನಾಮಫಲಕ ಅಳವಡಿಸಲು ಇದೇ ಫೆ. 29 ಕೊನೆಯ ದಿನವಾಗಿದೆ. ಯಾವುದೇ ಕಾನೂನು ಕ್ರಮಕ್ಕೆ ಅವಕಾಶಕೊಡದೆ, ತಕ್ಷಣವೇ ತಮ್ಮ ಅಂಗಡಿಗಳ ನಾಮಫಲಕ ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು. ಯಾವುದೇ ತರಹದ ಘರ್ಷಣೆಗೆ ಅವಕಾಶ ಕೊಡದೇ, ಕನ್ನಡಕ್ಕೆ ಪ್ರಥಮಾದ್ಯತೆ ನಿಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಮಾತನಾಡಿ, ಈಗಾಗಲೇ ಪಟ್ಟಣದ ಎಲ್ಲಾ ಓಣಿಗಳಲ್ಲಿಯೂ ಇರುವ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದಕ್ಕೂ ಮೀರಿ ಅನ್ಯ ಬಾಷೆಗೆ ಆದ್ಯತೆ ನೀಡಿದರೆ ಸರ್ಕಾರ ಆದೇಶದ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ ಮಾತನಾಡಿ, ಬಹುದಿನದ ಹೋರಾಟಗಳ ಫಲವಾಗಿ ಇಂದು ಸದನದಲ್ಲಿ ಕನ್ನಡಭಾಷೆಗೆ ಪ್ರಥಮಾದ್ಯತೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶಕ್ಕೆ ಸಾರ್ವಜನಿಕರು ಗೌರವಿಸಬೇಕು. ತಾಲೂಕಿನ ಗ್ರಾಮೀಣ ಭಾಗ ಮತ್ತು ಪಟ್ಟಣ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳ, ಆಸ್ಪತ್ರೆ, ಹೋಟೆಲ್, ಶಾಲಾ ಕಾಲೇಜುಗಳ ಮೇಲೆ ಕಡ್ಡಾಯವಾಗಿ 60% ಅಳತೆಯಲ್ಲಿ ಕನ್ನಡ ನಾಮ ಫಲಕ ಕಡ್ಡಾಯವಾಗಿರಬೇಕು ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕನ್ನಡ ಭಾಷೆಯ ನಾಮಫಲಕಕ್ಕೆ ಪ್ರಥಮಾದ್ಯತೆ ನೀಡಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಂಡು ಕಾನೂನು ರೀತಿ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಖಾಸಗಿ ಶಾಲೆಗಳು ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಇದುವರೆಗೆ ಅನ್ಯ ಭಾಷೆಯ ನಾಮಫಲಕಗಳೇ ಕಾಣುತ್ತಿವೆ. ಫೆ.29 ರ ನಂತರ ಹೀಗೆ ಮುಂದು ವರೆದರೆ ಬೆಂಗಳೂರು ಮಾದರಿಯಲ್ಲಿ ಭಾಲ್ಕಿಯಲ್ಲಿಯೂ ಉಗ್ರ ಹೋರಾಟ ನಡೆಸಲಾಗುವುದು.
-. ಗಣೇಶ ಪಾಟೀಲ, ಅಧ್ಯಕ್ಷರು, ಕರವೇ ತಾಲೂಕು ಘಟಕ ಭಾಲ್ಕಿ.