ಜೂನ್ ವೇಳೆಗೆ ರೈಲ್ವೇ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೨೭; ದಾವಣಗೆರೆ ರಸ್ತೆ ಹಾಗೂ ಕವಾಡಿಗರಹಟ್ಟಿ ಹತ್ತಿರದ ಹೊಳಲ್ಕೆರೆ ರಸ್ತೆಯಲ್ಲಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ರೈಲ್ವೇ ಮಂಡಳಿ ಅನುಮೋದನೆಗಾಗಿ ಕಳುಹಿಸಿ ಕೊಡಲಾಗಿದೆ. ಮಂಡಳಿ ಶೀಘ್ರವೇ ಯೋಜನೆಗೆ ಅನುಮೋದನೆ ನೀಡಲಿದ್ದು, ಜೂನ್ ವೇಳೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಸಿ.ವಿರೇಂದ್ರಪಪ್ಪಿ ಭರವಸೆ ವ್ಯಕ್ತಪಡಿಸಿದರು.ಅಮೃತ ಭಾರತ ರೈಲ್ವೇ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ರೂ.41 ಸಾವಿರ ಕೋಟಿ ವೆಚ್ಚದಲ್ಲಿ ದೇಶದ ವಿವಿಧ 554 ಪ್ರಮುಖ ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿ, 1500 ಮೇಲು ಹಾಗೂ ಕೆಳಸೇತುವೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಯೋಜನೆಗೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಅಮೃತ ಯೋಜನೆ ಅಡಿ ರೂ.11.78 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ನಗರದ ರೈಲ್ವೇ ನಿಲ್ದಾಣವನ್ನೂ ಸಹ ನವೀಕರಣಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ವೀರೇಂದ್ರ ಪಪ್ಪಿ ಪಾಲ್ಗೊಂಡು ಮಾತನಾಡಿದರು.ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಳ್ಳುವ ಹಂತದಲ್ಲಿದೆ.  ವರ್ಷಾಂತ್ಯದ ವೇಳೆ ನೇರ ರೈಲ್ವೇ ಯೋಜನೆಯ ಕಾಮಗಾರಿ ಆರಂಭವಾಗಲಿದೆ. ಚಿತ್ರದುರ್ಗ ರೈಲ್ವೇ  ನಿಲ್ದಾಣ ಪುನರಾಭಿವೃದ್ಧಿ ಯೋಜನೆ ಜಿಲ್ಲೆಗೆ ಪ್ರಧಾನಿಗಳ ಅತಿದೊಡ್ಡ ಕೊಡುಗೆಯಾಗಿದೆ. ಸುಮಾರು ರೂ.12 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮಾಡಲಾಗುವುದು. ನೈರುತ್ಯ ರೈಲ್ವೇ ವಿಭಾಗದಲ್ಲಿ ಒಟ್ಟು 31 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಚಿತ್ರದುರ್ಗ ಇದರಲ್ಲಿ ಸೇರಿರುವುದಕ್ಕೆ ಸಂತಸವಾಗಿದೆ. ಚಿತ್ರದುರ್ಗದಲ್ಲಿ ರೈಲ್ವೇ ಹಾಸ್ಪಿಟಲ್ ಸಹ ನಿರ್ಮಿಸಲು ಬೇಡಿಕೆಯ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರೈಲ್ವೇ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನ ಪಡುವುದಾಗಿ ಶಾಸಕ ವೀರೇಂದ್ರ ಪಪ್ಪಿ ತಿಳಿಸಿದರು.