ಜ್ವರ ಭಾದಿತ ಕೆನ್ನೆಡಲು ಗ್ರಾಮಕ್ಕೆ ಜಿಲ್ಲಾ ಸರ್ವೇಕ್ಷಣಾ ತಂಡ ಭೇಟಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಫೆ.೨೭; ಚಿತ್ರದುರ್ಗ ತಾಲ್ಲೂಕಿನ ಡಿ.ಎಸ್.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆನ್ನೆಡಲು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಜ್ವರ ಪ್ರಕರಣಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾ ಸರ್ವೇಕ್ಷಣಾ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲಾ ಸರ್ವೇಕ್ಷಣಾ ತಂಡದ ಜಿಲ್ಲಾ ರೋಗಶಾಸ್ತ್ರಜ್ಞ ಡಾ.ರುದ್ರೇಶ್, ಪ್ರಯೋಗಶಾಲಾ ತಂತ್ರಜ್ಞ ನಾಗರಾಜ್ ನಾಯ್ಕ್, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಡಿ.ಎಸ್.ಹಳ್ಳಿ ಆರೋಗ್ಯ ನಿರೀಕ್ಷಣಾಧಿಕಾರಿ ಬಾಗೇಶ್ ಅವರು ಜ್ವರ ಭಾದಿತ ಕೆನ್ನೆಡಲು ಗ್ರಾಮಕ್ಕೆ ಭೇಟಿ ನೀಡಿ ಜ್ವರ  ಕ್ಲಿನಿಕ್ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಆರೋಗ್ಯ, ಶಿಕ್ಷಣ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.ಕೆನ್ನೆಡೆಲು ಗ್ರಾಮದ ಕೆಲವು ನಿವಾಸಿಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಂಡು ರಕ್ತ ಪರೀಕ್ಷೆ ಮಾಡಿಸಲಾಗಿದ್ದು, ಡೆಂಗ್ಯೂ ರೋಗ ಇರುವುದು ಕಂಡುಬಂದಿದೆ. ಗ್ರಾಮದಲ್ಲಿ ಜ್ವರ ಪರೀಕ್ಷೆ, ತಾತ್ಕಾಲಿಕ ಜ್ವರ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಜ್ವರದ ಜೊತೆಗೆ ಸುಸ್ತು, ಮೈಕೈನೋವು ಇರುವಂತಹ ಕೆಲ ಪ್ರಕರಣಗಳನ್ನು ಗ್ರಾಮದಲ್ಲಿಯೇ ಐವಿ ಫ್ಲ್ಯೂಡ್ಸ್ ಮುಖಾಂತರ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮದಲ್ಲಿ ಮನೆ ಮನೆ ಸಮೀಕ್ಷೆ ಮಾಡಿ ಜ್ವರ ಪ್ರಕರಣಗಳ ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಮನೆಗೂ ಭೇಟಿ ನೀಡಿ ಲಾರ್ವಸರ್ವೆ ನಡೆಸಲಾಯಿತು.  ಕುಟುಂಬದವರಿಗೆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಮಾಹಿತಿ ನೀಡಿ ಡೆಂಗ್ಯೂ ರೋಗದ ಲಕ್ಷಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಲಾಯಿತು.