ಸುಖದಾಯಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕ :  ರಂಭಾಪುರಿ ಶ್ರೀ

ಭದ್ರಾವತಿ.ಫೆ.೨೭; ಬದುಕು ಭಗವಂತನ ಕೊಡುಗೆ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಿಗೊಳ್ಳಬೇಕು. ಸುಖ ಶಾಂತಿದಾಯಕ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕತೆ ಇದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಅಂಗವಾಗಿ ನಡೆದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಧರ್ಮದಲ್ಲಿರುವ ಉದಾತ್ತ ತತ್ವಗಳು ಜೀವನದ ಶ್ರೇಯಸ್ಸಿಗೆ ಕಾರಣವಾಗಿವೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುವ ಉದಾತ್ತ ಗುರಿ ಹೊಂದಿದೆ ಎಂದ ಅವರು ತತ್ವ ತ್ರಯಗಳನ್ನು ಮನುಷ್ಯ ಆಚರಿಸಿ ಜೀವನದಲ್ಲಿ ಉನ್ನತಿಯನ್ನು ಕಾಣಬೇಕಾಗಿದೆ. ಕೂಡ್ಲಿಗೆರೆ ಗ್ರಾಮದಲ್ಲಿ ನಿರ್ಮಿಸಿದ ನೂತನ ಶ್ರೀ ಬಸವೇಶ್ವರಸ್ವಾಮಿ ಸುಂದರ ದೇವಾಲಯ ಕಂಡು ತುಂಬಾ ಸಂತೋಷವಾಗಿದೆ ಎಂದರು.