ನಾನು ಆಕಾಂಕ್ಷಿ, ಟಿಕೇಟ್ ಸಿಗುವ ವಿಶ್ವಾಸವಿದೆ: ಪುಷ್ಪಾ ಅಮರನಾಥ್
ಸಂಜೆವಾಣಿ ನ್ಯೂಸ್
ಮೈಸೂರು: ಫೆ.27:- ಕಷ್ಟದ ಕಾಲದಲ್ಲಿ ರಾಜ್ಯಾಧ್ಯಕ್ಷೆಯಾಗಿ ರಾಜ್ಯವನ್ನೇ ಸಂಚರಿಸಿ ಪಕ್ಷ ಕಟ್ಟಿ, ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಚಾ.ನಗರ ಕ್ಷೇತ್ರದ ಮಗಳು, ಸೊಸೆಯಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು, ಖಂಡಿತ ಟಿಕೇಟ್ ಸಿಗುವ ವಿಶ್ವಾಸವಿದೆ ಎಂದು ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದೇನೆ. ವಿಧಾನಸಭಾ ಚುನಾವಣೆ ವೇಳೆಯೂ ಸಕಲೇಶಪುರ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲ. ಆಗಂತ ನಾವೇನು ಪಕ್ಷದ ವಿರುದ್ದ ಹೋಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವೊಂದೇ ನಮಗೆ ಮಾನದಂಡ. ಚಾಮರಾಜನಗರ ಕ್ಷೇತ್ರದಲ್ಲಿ ಈ ಭಾರಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವರಣವಿದೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಅನುಕೂಲತೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಮಹಿಳೆಯರಿಗೆ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಹಣವನ್ನ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹಾನುಭಾವರಿಗೆ ಜನರಿಗೆ ಒಳ್ಳೆಯ ಕೆಲಸ ಮಾಡುವ ಮನಸ್ಸಿಲ್ಲ. ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದನ್ನು ನಾವು ನೋಡಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನರ ಕೈಹಿಡಿದಿದೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ಸಹ ನೋಡದೇ ರೈತರ ಕ್ಷೇಮಾಭಿವೃದ್ಧಿ ಕಾಣದೇ ಹಣವನ್ನು ಕೊಡದೇ ಅನ್ಯಾಯ ಮಾಡಿದೆ ಎಂದರು.
ಮೋದಿ ಗ್ಯಾರಂಟಿಗಳ ಪಟ್ಟಿಯ ಪೆÇೀಸ್ಟರ್ ತೋರಿಸುವ ಮೂಲಕ ವ್ಯಂಗ್ಯವಾಡಿದ ಪುಷ್ಪ ಅಮರನಾಥ್, ಮೋದಿ ಹತ್ತು ವರ್ಷಗಳ ಸಾಧನೆ ಏನೆಂದು ನೋಡಿ. ಕೇವಲ ಬೆಲೆ ಏರಿಕೆ ಹಾಗೂ ಅತಂತ್ರ ಪರಿಸ್ಥಿತಿ ತಂದಿರುವುದೇ ಮೋದಿ ಗ್ಯಾರಂಟಿ. ಈ 10 ವರ್ಷದ ಅವಧಿಯಲ್ಲಿ ಮೋದಿಯವರು ಮಾಡಿದ ಒಂದು ಅಭಿವೃದ್ಧಿ ವಿಚಾರ ತಿಳಿಸಿ. ಕೇವಲ ರಾಮ ಮಂದಿರ ಕಟ್ಟುವುದೇ ಸಾಧನೆಯೇ, ಕಳೆದ ಬಾರಿ ಪುಲ್ವಾಮಾ ದಾಳಿ ವಿಚಾರ ಇಡ್ಕೊಂಡು ಗೆದ್ದರು. ಈ ಬಾರಿ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಿ. ಈ ರೀತಿ ಭಾವನಾತ್ಮಕ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದು ಬಿಜೆಪಿ ಮಾತ್ರ. ಅದಕ್ಕೆ ಸಿ.ಎಂ.ಸಿದ್ದರಾಮಯ್ಯ ಸಾಹೇಬರು ಹೇಳಿದ್ದು ಸುಳ್ಳೇ ಬಿಜೆಪಿ ಮನೆದೇವರು ಅಂತ ಪುಷ್ಪಾ ಅಮರನಾಥ್ ಲೇವಡಿ ಮಾಡಿದರು.
ಬೆಲೆ ಏರಿಕೆಗೆ ಪಾಠ ಕಲಿಸಿ
ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಜನರ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದೆ. ಅಗತ್ಯ ವಸ್ತುಗಳಾದ ಬೆಳೆ, ಪೆಟ್ರೋಲ್, ಡಿಸೇಲ್ ಮೊದಲಾದವುಗಳೆಲ್ಲವುದರಲ್ಲಿ ರಿಯಾಯಿತಿ ಕಣ್ಮರೆಯಾಗಿ ದುಬಾರಿಯಾಗಿದೆ. ಹೀಗಾಗಿ ದೇಶದ ಮಹಿಳೆಯರ ಪರವಾಗಿ ನಾನು ಏರುತ್ತಿರುವ ಬೆಲೆ ಏರಿಕೆ ಕಡಿಮೆ ಮಾಡಿಸುವಂತೆ ಆಗ್ರಹಿಸುತ್ತೇನೆ. ಸಾಮಾನ್ಯ ಮಹಿಳೆಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರೇ ಪಾಠ ಕಲಿಸಲಿದ್ದಾರೆ ಎಂದರು.