ಡಾ.ಸಿ.ಎನ್.ಮಂಜುನಾಥ್‍ಗೆ ಅಭೂತಪೂರ್ವ ಸನ್ಮಾನ
ಸಂಜೆವಾಣಿ ನ್ಯೂಸ್
ಮೈಸೂರು: ಫೆ.27:- ಸಾಂಸ್ಕೃತಿಕ ನಗರಿ ಮೈಸೂರಿನ ಕಲಾಮಂದಿರದಲ್ಲಿ ಕಿಕ್ಕಿರಿದು ಸೇರಿದ ಜನ ಸಮೂಹದ ನಡುವೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಧನ್ಯವಾದ ಧನ್ವಂತರಿ ಎಂಬ ಬಿರುದಿನೊಂದಿಗೆ ಅಭೂತಪೂರ್ವವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ಪಬ್ಲಿಕ್ ವಾಹಿನಿ ಮುಖ್ಯಸ್ಥರಾದ ರಂಗಣ್ಣ ಮೊದಲಾದ ಮಂಜುನಾಥ್ ಅವರನ್ನು ಸನ್ಮಾನಿಸಿದರು.
ಸಂಸದ ಪ್ರತಾಪಸಿಂಹ ಅವರು ಮಾತನಾಡಿ, ಒಂದು ಸರ್ಕಾರ ಮಾಡಲಾಗದ ಕೆಲಸವನ್ನು ನೀವೂ ಮಾಡಿದ್ದೀರಿ ಅದೇ ಕಾರಣಕ್ಕೆ ಜನರು ನಿಮ್ಮನ್ನೂ ಇಷ್ಟೊಂದು ಪ್ರೀತಿಸುತ್ತಾರೆ. ನಿಮ್ಮಂತಹವರು ರಾಜಕಾರಣಕ್ಕೆ ಬರಬೇಕು. ಇಂದು ರಾಜಕಾರಣ ಕೆಟ್ಟಿಲ್ಲ. ಹೆಚ್ಚು ಉದ್ಯಮಿಗಳು ಬಂದು ಎಲ್ಲದರಲ್ಲೂ ಲಾಭ ಹುಡುಕುತ್ತಾರೆ. ಆದರೆ, ನಿಮ್ಮಂತವರು ರಾಜಕೀಯ ಕ್ಕೆ ಬಂದರೆ ಎಲ್ಲರ ಮನಸ್ಸಲ್ಲಿ ನೀವೂ ಲಾಭ ಗಳಿಸುವ ಪ್ರಯತ್ನ ಮಾಡುತ್ತೀರಿ. ನಿಜಕ್ಕೂ ಸಮಾಜ ಬದಲಾವಣೆ ಪ್ರಯತ್ನ ರಾಜಕೀಯದಿಂದ ಸಾಧ್ಯವಾಗುತ್ತದೆ. ಅದು ಸಾಧ್ಯ ಆಗಬೇಕಾದರೆ ನಿಮ್ಮಂತವರು ರಾಜಕೀಯಕ್ಕೆ ಬರಬೇಕು. ಮೈಸೂರಿಗರ ಪರವಾಗಿ ನಿಮ್ಮನ್ನೂ ರಾಜಕೀಯಕ್ಕೆ ಬನ್ನಿ ಎಂದು ಕರೆಯುತ್ತೇನೆಂದರು.
ಇದಕ್ಕೂ ಮುನ್ನ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಮಾತನಾಡಿ, ಡಾ ಮಂಜುನಾಥ್ ರವರು ಕೋಟು ಬಿಚ್ಚುವ ಸಮಯ ಬಂದಿದೆ. ನಿಮ್ಮ ಸೇವೆಯನ್ನ ಈ ಸಮಾಜ ನೆನೆಯುತ್ತೆ ಎಂಬ ವಿಶ್ವಾಸವಿದೆ. ಒಂದು ವೇಳೆ ನೆನೆಯದೆ ಇದ್ದರು ನಷ್ಟವಿಲ್ಲ. ನಿಮ್ಮನ್ನ ಕಳೆದುಕೊಂಡರೆ ಅದು ಸಮಾಜಕ್ಕೆ ನಾಚಿಕೆ ಆಗಬೇಕು. ರಾಜಕೀಯ ನಂಟು ಇದ್ದರು ಕೂಡ ಅವರು ರಾಜಕಾರಣಕ್ಕೆ ಸಿಲುಕಲಿಲ್ಲ. ಯಾವುದೇ ಗೊಂದಲಗಳನ್ನ ಇಟ್ಟುಕೊಳ್ಳದೆ ನಿರ್ಧಾರ ಕೈಗೊಳ್ಳಿ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, 70 ಲಕ್ಷ ರೋಗಿಗಳಿಗೆ ಚಿಕಿತ್ಸೆ, 8 ಲಕ್ಷ ಆಪರೇಷನ್ ಗಳನ್ನು ಮಾಡಿದ್ದೇನೆ. ಇದೆಲ್ಲವೂ ನನ್ನ ತಂಡ ನನಗೆ ನೀಡಿದ ಸಹಕಾರದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಇಂದು ನಮ್ಮ ಶಿಕ್ಷಣ ಎಷ್ಟು ಮಂದಿಗೆ ನೆರವಾಗಿದೆ ಎಂಬುದು ಬಹಳ ಮುಖ್ಯ ಆಗುತ್ತದೆ. ಪ್ರತಿಯೊಬ್ಬರಿಗೂ ಅವಕಾಶ ಇದ್ದೆ ಇರುತ್ತದೆ. ಇದರ ಅರ್ಥ ನಾವು ನಮ್ಮ ಕೆಲಸವನ್ನು ಪ್ರೀತಿಸಿದರೆ ಅದು ಸಹ ನಮ್ಮನ್ನೂ ಪ್ರೀತಿಸುತ್ತದೆ. ಸಾಧನೆಗಳು ಮಾತನಾಡಬೇಕೆ ಹೊರತು ಕೆಲಸ ಮಾತನಾಡಬೇಕು. ಸರ್ಕಾರಿ ಪಂಚಾತಾರ ಆಸ್ಪತ್ರೆಯನ್ನು ಖಾಸಗಿ ಮಾದರಿಯಲ್ಲಿ ಬೆಳೆಸಿ ದೇಶಕ್ಕೆ ತೋರಿಸಬೇಕೆಂಬ ಕನಸು ಹಂಬಲ ಇಂದೂ ಈಡೇರಿದೆ ಎಂದರು.
ಇದೇ ವೇಳೆ ನೂರಾರು ಮಂದಿ ಮಂಜುನಾಥ್ ಅವರನ್ನು ಸನ್ಮಾನಿಸಿದರು.