ಡಿಸಿ ಆದೇಶಕ್ಕೆ ಮಣಿದ ಪಿಡಿಯಿಂದ ತನಿಖಾ ಶಾಸ್ತ್ರ..!
ಸಂಜೆವಾಣಿ ವಾರ್ತೆ
ಹನೂರು: ಫೆ.27:- ಚಾಮರಾಜನಗರ ಜಿಲ್ಲೆಯ ನಗರ ಸಭೆಯ ಆಡಳಿತ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳಲು ಮುಂದಾದರೆ ಬಗೆದಷ್ಟು ಕರ್ಮಕಾಂಡಗಳೇ ಅಧಿಕವಾಗಿ ಹೊರ ಬೀಳುತ್ತಿವೆ.
ತಮ್ಮ ಅನುಕೂಲಕ್ಕೆ ತಕ್ಕ ಸಮಯಕ್ಕೆ ಕಛೇರಿಗೆ ಆಗಮಿಸುವುದು ಪೌರಾಯುಕ್ತ ರಾಮದಾಸ್ ರ ಮಾಮೂಲಿ ಖಯಾಲಿಯಾಗಿದೆ. ನಗರಸಭೆಯ ಆಡಳಿತದ ಲೋಪದೋಷಗಳನ್ನು ಹೇಳುವವರು ಕೇಳುವವರಿಲ್ಲದ ಕಾರಣ ಕಡಿವಾಣವಿಲ್ಲದ ಕುದುರೆಯಂತಾಗಿ ಬಿಟ್ಟಿದೆ. ಪತ್ರಿಕಾ ವರದಿಗಳಿಂದ ಶೇಕ್ ಆಗಿರುವ ಹೊರಗುತ್ತಿಗೆ ನೌಕರರ ದರ್ಬಾರ್, ಹೊರನೋಟಕ್ಕೆ ಕೊಂಚ ಪ್ರಮಾಣದಲ್ಲಿ ಬ್ರೇಕ್ ಬಿದ್ದಿದ್ದರೂ ತೆರೆಮರೆಯಲ್ಲಿ ಅವರುಗಳ ಆಟಾಟೋಪ ಮತ್ತಷ್ಟು ಮೇರೆ ಮೀರಿದೆ.
ಕಛೇರಿಯಲ್ಲಿ ಅವರಿಗೆ ನಿಗಧಿಪಡಿಸಿದ ಶಾಖೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿಗಷ್ಟೆ ಸೀಮಿತವಾಗಿರುವುದನ್ನು ಬಿಟ್ಟರೆ, ಪೌರಾಯುಕ್ತ ರಾಮದಾಸ್ ಮಾತ್ರ ತನಗೇನು ತಿಳಿದೇ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ಎನ್ನುವಂತೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ಮೌನವೇ ಆಭ(ಕಾ)ರಣ ಎನ್ನಬಹುದಾಗಿದೆ.
ಬೇಕಾಬಿಟ್ಟಿಯಾಗಿ ನಗರಸಭೆಗೆ ಆಗಮಿಸುವ ಪೌರಾಯುಕ್ತರು ಹಾಜರಾತಿ ಹಾಕಿ ಕೆಲ ಸಮಯ ತಮ್ಮ ಕೊಠಡಿಯಲ್ಲಿ ವಿರಮಿಸಿ ನಂತರ ಸಿಬ್ಬಂದಿಗಳನ್ನು ಕರೆಯಿಸಿ ಚರ್ಚೆ ನಡೆಸಿದ ಬಳಿಕ ಸಿಟಿ ರೌಂಡ್ಸ್, ಆ ಮೀಟಿಂಗ್ ಈ ಮೀಟಿಂಗ್ ಅಂತ ನೆಪ ಹೇಳಿಕೊಂಡು ನಾಪತ್ತೆಯಾಗುವುದು ಇದೀಗ ಸಾಮಾನ್ಯವಾಗಿ ಬಿಟ್ಟಿದೆ. ಕಛೇರಿಯಲ್ಲಿದ್ದಾಗ ಯಾವ ಪತ್ರಕರ್ತರು,ಪ್ರಬುದ್ದ ನಾಗರೀಕರು ಬಂದು ತನ್ನನ್ನು ಪ್ರಶ್ನೆ ಮಾಡುವರೋ ಅನ್ನೋ ಭೀತಿಯಲ್ಲಿರುವ ಪೌರಾಯುಕ್ತ ರಾಮದಾಸ್ ಕಛೇರಿಯಲ್ಲಿ ಇರುವ ಸಮಯಕ್ಕಿಂತ ಹೆಚ್ಚಾಗಿ ಹೊರಗಡೆನೇ ಇರೋದು ಅಧಿಕವಾಗಿದೆ.
ಕುಂದು ಕೊರತೆ ಹಾಗೂ ಇನ್ನಿತರ ಮಾಹಿತಿಗಳಿಗೆ ಸಾರ್ವಜನಿಕರು ಕಛೇರಿಗೆ ಅಲೆದಾಡುವುದು ತಪ್ಪಿಲ್ಲ. ಸಮಸ್ಯೆ ಹೇಳಿಕೊಳ್ಳಲು ಪೌರಾಯುಕ್ತರ ಮೊಬೈಲ್ ಗೆ ಕರೆ ಮಾಡಿದರೆ ಕರೆಗಳನ್ನು ಸ್ವೀಕರಿಸುವುದಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ. ತಮ್ಮ ಮೊಬೈಲ್ ನಲ್ಲಿ ಸೇವ್ ಆಗಿರುವ ತಮ್ಮ ಅತ್ಯಾಪ್ತರು ಹಾಗೂ ಅವಶ್ಯಕತೆಯಿರುವವರ ಮೊಬೈಲ್ ನಂಬರ್ ಗಳನ್ನು ಹೊರತುಪಡಿಸಿ ಅನ್ಯ ಯಾರದೇ ಕರೆ ಬಂದರೂ ಸುತಾರಾಂ ಸ್ವೀಕರಿಸುವುದಿಲ್ಲ ಎಂಬುದು ಜಗಜ್ಜಾಹೀರಿನ ಸಂಗತಿ.
ಈ ನಡುವೆ ಮಾರ್ಚ್ 1 ರಂದು ಚಾಮರಾಜನಗರ ನಗರ ಸಭೆಯ 2024-25 ಸಾಲಿನ ಬಜೆಟ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಬಜೆಟ್ ಮಂಡನೆ ಮಾಡಲಿರುವರು ಈ ವೇಳೆ ಸಭೆಯಲ್ಲಿ ಭಾಗವಹಿಸುವ ನಗರಸಭೆಯ ಕೆಲವು ಅಸಮಾಧಾನಿತ ಸದಸ್ಯರಗಳು ನಗರಸಭೆಯ ಆಡಳಿತ ಮತ್ತು ಪೌರಾಯುಕ್ತರ ದುರಾಡಳಿತದ ವಿರುದ್ದ ಪತ್ರಿಕೆಗಳಲ್ಲಿ ಬಂದಿರುವ ದೂರು ವರದಿಗಳ ಬಗ್ಗೆ ಚಕಾರ ಎತ್ತುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮುಂಜಾಗರೂಕತೆ ವಹಿಸಿ ನೊಂದವರ ಬಾಯಿ ಮುಚ್ಚಿಸಲು ಮುಂಧಾಗಿರುವ ರಾಮದಾಸ್ ಸದಸ್ಯರುಗಳನ್ನು ತನ್ನತ್ತ ಓಲೈಸಿಕೊಳ್ಳಲು ಸದಸ್ಯರು ಕೇಳದಿದ್ದರೂ ಬಲವಂತವಾಗಿ ಉಡುಗೊರೆಯನ್ನು ಕೊಡುವ ಹಂತಕ್ಕೆ ಹೋಗಿದ್ದಾರೆ ಎಂಬ ಗುಸು ಗುಸು ಅಧಿಕಾರಿ/ಜನಪ್ರತಿನಿಧಿ ವಲಯಗಳಿಂದಲೇ ಕೇಳಿ ಬರುತ್ತಿದೆ.
ಪತ್ರಿಕೆಗಳಲ್ಲಿ ಪುಂಖಾನು ಪುಂಖವಾಗಿ ನಗರಸಭೆ ವಿರುದ್ದ ವರದಿಗಳು ಪ್ರಕಟವಾಗುತ್ತಿದ್ದಂತೆ ಸಾರ್ವಜನಿಕರ ಕಣ್ಣೊರೆಸಲು ಹಾಗೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲ್ಲಷ್ಟೆ ಮುಂದಾಗಿರುವ ಕಾಟಾಚಾರದ, ,ಬೇನಾಮಿ, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಶಿಲ್ಪನಾಗ್, ನಗರಸಭೆಯ ಆಡಳಿತ ಮತ್ತು ಸಿಬ್ಬಂದಿಗಳ ವಿಚಾರಣೆ ಮತ್ತು ಕಡತಗಳ ಪರಿಶೀಲನೆಯನ್ನು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಧಾರವರ ಮೂಲಕ ನಾಮಕಾವಸ್ತೆಯಾಗಿ ಮಾಡಿಸಿದ್ದಾರೆಯೇ ವಿನಃ ಬೇರೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಕ್ಕೆ ಮುಂದಾಗದಿರುವುದು ಇವರ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ನಗರಸಭೆಯ ದುರಾಡಳಿತದ ವಿರುದ್ದ ನೊಂದವರಿಂದ ಪೌರಾಡಳಿತ ಇಲಾಖೆಗೂ ದೂರು ಹೋಗಿದ್ದು, ಯಾವುದೇ ಸಮಯದಲ್ಲಾದರೂ ನಗರಸಭೆಗೆ ತನಿಖೆಗೆ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಪಾರದರ್ಶಕ ಆಡಳಿತಕ್ಕೆ ಅಳವಡಿಕೆಯಾಗಿರುವ ಸಿಸಿ ಕ್ಯಾಮೆರಾ ಗುಪ್ತ್ ಗುಪ್ತ್ ಆಡಳಿತದಿಂದಾಗಿ ಅಕ್ರಮಗಳನ್ನು ಮುಚ್ಚಿಡಲು ಈಗಾಗಲೇ ಬಂದ್ ಆಗಿವೆ. ಕ್ರಮ ಬದ್ದವಾಗಿರ ಬೇಕಾದವರೇ ಅಕ್ರಮ ಎಸಗಲು ಮುಂದಾದರೆ ಸುಗಮ ಆಡಳಿತ ನಡೆಯುವುದಾದರು ಹೇಗೆ ಎಂಬುದೆ ಯಕ್ಷ ಪ್ರಶ್ನೆಯಾಗಿದ್ದು ಇದಕ್ಕೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕಾಗಿದೆ.