ಯನಗುಂದಾ ಗ್ರಾಮದಲ್ಲಿ “ಶಿವ ಪಾರ್ವತಿ ಮೂರ್ತಿ ಪ್ರತಿಷ್ಠಾಪನೆ”
ಸಂಜೆವಾಣಿ ವಾರ್ತೆ
ಔರಾದ್ : ಫೆ.27:ತಾಲೂಕಿನ ಯನಗುಂದಾ ಗ್ರಾಮದ ಶಿವ ಪಾರ್ವತಿಯ ನೂತನ ದೇವಾಲಯದಲ್ಲಿ ಸೋಮವಾರ ಹಣೇಗಾಂವ ಶ್ರೀಗಳಾದ ಶಂಕರಲಿಂಗ ಶಿವಾಚಾರ್ಯರು, ಡಾಕುಳಗಿ ಶ್ರೀಗಳಾದ ಚನ್ನಬಸವೇಶ್ವರ ಶಿವಾಚಾರ್ಯರು, ತೆಲಂಗಾಣದ ಗುಡಿಮಠದ ಮಹಾದೇವ ಸ್ವಾಮಿಜಿ, ಯನಗುಂದಾದ ವಿರಕ್ತ ಮಠದ ಮಲ್ಲಯ್ಯ ಸ್ವಾಮಿಜಿ ಅವರ ದಿವ್ಯಸಾನಿಧ್ಯದಲ್ಲಿ ಶಿವ ಪಾರ್ವತಿ ಮೂರ್ತಿ ಸ್ಥಾಪನೆ, ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಕಳೆದ ಒಂದು ವಾರದಿಂದ ಭರದ ಸಿದ್ಧತೆಗಳು ನಡೆದಿದ್ದು, ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿವ ಪಾರ್ವತಿ ಮೂರ್ತಿ ಸ್ಥಾಪನೆ ಮಾಡಲಾಯಿತು. ಮೂರ್ತಿ ಸ್ಥಾಪನೆ ಹಾಗೂ ಕಳಸಾರೋಹಣ ನಿಮಿತ್ತ ಕಳೆದ 7 ದಿನಗಳ ಕಾಲ ಅಖಂಡ ಶಿವನಾಮ ಸಪ್ತಾಹ ನಡೆದಿದ್ದು, ಇಂದು ಮೂರ್ತಿ ಸ್ಥಾಪನೆ ಮಾಡುವ ಮೂಲಕ ಸಮಾರೋಪ ಸಮಾರಂಭ ಮಾಡಲಾಗಿದೆ ಎಂದು ಗ್ರಾಮದ ಭಕ್ತಾದಿಗಳು ತಿಳಿಸಿದ್ದಾರೆ.
ಹಣೇಗಾಂವ ಶ್ರೀಗಳಾದ ಶಂಕರಲಿಂಗ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ಶಿವ ಪಾರ್ವತಿ ಮೂರ್ತಿ ಇರಲಿಲ್ಲ. ಗ್ರಾಮಸ್ಥರು ಒಗ್ಗೂಡಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಅಧ್ಯಾತ್ಮಿಕ ಪ್ರವಚನದಲ್ಲಿ ಭಾಗವಹಿಸಿಬೇಕು. ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ವೇಳೆ ಗುಂಡಯ್ಯ ಸ್ವಾಮಿ, ಗುರಯ್ಯ ಸ್ವಾಮಿ, ವಿಜಯಕುಮಾರ ಮೇತ್ರೆ, ಕಲ್ಲಯ್ಯ ಸ್ವಾಮಿ, ಗುರುಪಾದಪ್ಪ ಕೋರೆ, ಸಿದ್ರಾಮ ಕೋರೆ, ಅಶೋಕ ಶೆಟಕಾರ, ಕೃಷ್ಣ ಕಾಂಬಳೆ, ಬಸವರಾಜ ಪಾಟೀಲ್, ಸಿದ್ದು ಪಾಟೀಲ್, ಸಿದ್ದು ಹಂಗರಗೆ, ಪ್ರಭು ಪಾಟೀಲ್, ಉಮಾಕಾಂತ ಮೊರೆ, ಬಸವರಾಜ ವಾಡೆ ಸೇರಿದಂತೆ ಅನೇಕರಿದ್ದರು.