ನಾಲ್ಕು ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ : ಎಚ್ಚೆತ್ತುಕೊಳ್ಳದ ಅಧಿಕಾರಿಗಳು : ಅಣಕು ಶವವಿಟ್ಟು ಪ್ರತಿಭಟನೆ
ಸಂಜೆವಾಣಿ ವಾರ್ತೆ
ಔರಾದ್ :ಫೆ.27: ಪಟ್ಟಣದ ಹೃದಯ ಭಾಗದಲ್ಲಿರುವ ಅಮರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಒತ್ತುವರಿಯಾದ ಸ್ಮಶಾನಭೂಮಿ ತೆರವುಗೊಳಿಸಿ ಹೆಚ್ಚುವರಿಗಾಗಿ 10 ಎಕರೆ ಜಮೀನು ನೀಡುವಂತೆ ಆಗ್ರಹಿಸಿ ತಹಸೀಲ್ ಕಚೇರಿ ಆವರಣದಲ್ಲಿ ಕನ್ನಡಪರ ಹಾಗೂ ಹಿಂದುಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಅನಿರ್ದಿಷ್ಷಾವಧಿ ಧರಣಿ ಪ್ರತಿಭಟನೆ 4ನೇ ದಿನ ಪೂರೈಸಿ ಐದನೇ ದಿನಕ್ಕೆ ಕಾಲಿಟ್ಟಿದೆ.
ಕಚೇರಿಯ ಮುಖ್ಯಾದ್ವಾರದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಾಜಾ ಭಜಂತ್ರಿಯೊಂದಿಗೆ ಅಣಕು ಶವದ ಮೆರವಣಿಗೆ ನಡೆಸಿದರು. ಮೆರವಣಿಗೆಯೂದ್ದಕ್ಕೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಮಾತನಾಡಿದ ಕಾರ್ಯಕರ್ತರು ಪಟ್ಟಣದ ಅಮರೇಶ್ವರ ದೇವಸ್ಥಾನದ ಬಳಿಯಲ್ಲಿನ 2 ಎಕರೆ 6 ಗುಂಟೆ ಜಮೀನಿನ ಪೈಕಿ ರುದ್ರಭೂಮಿಯ 16 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ, ಸ್ಮಶಾನ ಭೂಮಿ ಸಾಲುತ್ತಿಲ್ಲ ಜನರಿಗೆ ಅನ್ಯಾಯ ಮಾಡಲಾಗಿದೆ. ಇದರಿಂದ ಪಟ್ಟಣದ ನಿವಾಸಿಗಳಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ, ಕೂಡಲೇ ಒತ್ತುವರಿ ಮಾಡಿಕೊಂಡಿರುವ ಜಮೀನು ಹಿಂಪಡೆಯುವ ಜತೆಗೆ ಹೆಚ್ಚುವರಿಯಾಗಿ ಹೊಸ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಹಲವು ಸಲ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಅಣಕು ಶವವನ್ನು ಕಚೇರಿಯ ಮುಂದಿಟ್ಟು ಪ್ರತಿಭಟನೆ ನಡೆಸಿದರಲ್ಲದೇ ಬೊಬ್ಬೆ ಹಾಕಿ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ತಹಸೀಲ್ದಾರ ನಾಗಯ್ಯ ಹಿರೇಮಠ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸ್ವಾಮಿದಾಸ ಭೇಟಿ ನೀಡಿದರು. ಈಗಾಗಲೇ ಒತ್ತುವರಿಯಾದ ಜಮೀನು ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದೇವೆ. ಎಲ್ಲ ಮೂಲದಿಂದ ತನಿಖೆ ನಡೆಸಿ ಮೋಟೆಷನ್ ಆಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಪ್ರತಿಭಟನೆ ಹಿಂಪಡೆಯರಿ ನಿಮ್ಮ ಬೇಡಿಕೆ ಈಡೇರಿಸುವದಾಗಿ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವದಿಲ್ಲ. ನಮ್ಮ ಬೇಡಿಕೆ ಈಡೇರಿದ ಬಳಿಕವೇ ಪ್ರತಿಭಟನೆ ಹಿಂಪಡೆಯುವದಾಗಿ ಪಟ್ಟುಹಿಡಿದರು. ಈ ವೇಳೆ ಅಧಿಕಾರಿಗಳು ಕಾರ್ತಕರ್ತರಿಗೆ ಮನವಲಿಸುವಲ್ಲಿ ವಿಫಲವಾದರು.
ಈ ಸಂದರ್ಭದಲ್ಲಿ ಪಿಎಸ್ ಐ ಉಪೇಂದ್ರ, ಮುಖಂಡ ಶರಣಪ್ಪ ಪಾಟೀಲ್, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಶಂಕು ನಿಶ್ಪತೆ, ಕರವೇ ತಾಲೂಕು ಅಧ್ಯಕ್ಷ ಅನಿಲ ಹೇಡೆ, ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ ವಿಶಾಲ ಕೋಳಿ, ಲಿಂಗಾಯತ ಸಮಾಜ ಅಧ್ಯಕ್ಷ ವಿರೇಶ ಅಲಮಾಜೆ, ವೀರಶೈವ ಲಿಂಗಾಯತ ಸಮಾಜ ನಗರ ಆಧ್ಯಕ್ಷ ಸಿದ್ದು ಚಾರೆ, ವಿರೇಶ ಕನಕೆ, ಅಮಿತ ಶಿವಪೂಜೆ, ಅಂಬ್ರೇಶ ಪಾಟೀಲ್, ವಿಶಾಲ ಚಿದ್ರೆ, ಸಂತು ದ್ಯಾಡೆ, ವಿವೇಕ ನಿರ್ಮಳೆ, ಸಚಿನ ಭಂಗೆ ಸೇರಿದಂತೆ ಅನೇಕರಿದ್ದರು.