ಬೈಕ್ ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ  ಉಪನ್ಯಾಸಕಿ ಮೃತ್ಯು
ಸುಳ್ಯ:ಕೆಲವು ದಿನಗಳ ಹಿಂದೆ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಉಪನ್ಯಾಸಕಿ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಮೃತಪಟ್ಟ ಘಟನೆ ನಡೆದಿದೆ.
ಸುಳ್ಯದ ಬೀರಮಂಗಲ ನಿವಾಸಿ, ಸುಳ್ಯ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ, ಈಗ ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ.ಅಚ್ಚುತ ಪೂಜಾರಿಯವರ ಪತ್ನಿ ಮಾಡಾವು ಜ್ಯೂನಿಯರ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಸುನಂದ ಅಚ್ಚುತ ಪೂಜಾರಿ (೪೦) ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸುವಾಗ ಗಾಳಿಗೆ ಕೊಡೆ ಎಳೆಯಲ್ಪಟ್ಟು ಸುನಂದ ಅವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ಮೃತರಿಗೆ ಪತಿ, ಇಬ್ಬರು ಪುತ್ರಿಯರು, ಸಹೋದರ ಇದ್ದಾರೆ.