ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಮೊದಲ ಆದ್ಯತೆ
ಕೋಲಾರ, ಸೆ.೧೬:ಪ್ರಚಲಿತ ವಿದ್ಯಮಾನಗಳ ಪ್ರಕಾರ ಗ್ರಾಮೀಣ ಭಾಗದ ಮಕ್ಕಳು ಇಂದಿಗೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಶಿಕ್ಷಕರು ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕೋಲಾರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್ ರಮೇಶ್ ಬಾಬು ಗಾಂಡ್ಲಹಳ್ಳಿ ಅಭಿಪ್ರಾಯ ಪಟ್ಟರು.
ಗುರುವಾರ ಪಾಲಸಂದ್ರ ಲೇ ಔಟ್ ನ ರಮೇಶ್ ಬಾಬು ರವರ ಸ್ವಗೃಹದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಭಿನಂದನೆಗಳನ್ನು ಸ್ವೀಕರಿಸಿ ಅವರು ಮಾತಾನಾಡುತ್ತಿದ್ದರು.
ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಾಗ ಫೇಲ್ ಆದವರ ಸಂಖ್ಯೆ ನೋಡಿದಾಗ ಹೆಚ್ಚು ಕಂಡು ಬರುವುದೇ ಗ್ರಾಮೀಣ ಭಾಗದ ಮಕ್ಕಳು. ಸರ್ಕಾರದ ಕೆಲವೊಂದು ತಪ್ಪು ನೀತಿ, ಗಣಿತ-ವಿಜ್ಞಾನ ಶಿಕ್ಷಕರ ಕೊರತೆ, ಸೂಕ್ತ ಪ್ರಯೋಗಾಲವು ಇಲ್ಲದಿರುವುದು ಇದಕ್ಕೆ ಕಾರಣವಾಗಿರಬಹುದು. ಇದರ ಹೊರತಾಗಿಯೂ ಶಿಕ್ಷಕರು ಗ್ರಾಮೀಣ ಭಾಗದ ಮಕ್ಕಳ ಮೇಲೆ ಹೆಚ್ಚು ಗಮನಹರಿಸಿದಲ್ಲಿ ಅವರು ಸಹ ಮುಂದೆ ಬರಲು ಸಾಧ್ಯ ಇದೆ ಎಂದ ಅವರು, ಇದರಲ್ಲಿ ಅನೇಕರು ಪ್ರತಿಭಾನ್ವಿತರು ಇದ್ದಾರೆ, ಆದರೆ ಬಹುತೇಕರಿಗೆ ಅವಕಾಶ ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿ. ಆರ್ ಅಶೋಕ್ ರವರು ಮಾತಾನಾಡುತ್ತಾ ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸುವ ಪ್ರಯತ್ನ ಶಿಕ್ಷಕರಿಂದ ಮೊದಲಾಗಬೇಕು. ವಿದ್ಯಾರ್ಥಿಗಳಲ್ಲಿ ಮುಂದಿನ ಬದುಕಿಗೆ ಬೇಕಾಗುವಂತ ಸ್ಥೈರ್ಯ ಮತ್ತು ಧೈರ್ಯವನ್ನು ಶಿಕ್ಷಕರು ಸಮಂಜಸವಾಗಿ ತಿಳಿಹೇಳಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬದುಕನ್ನು ಎದುರಿಸುವ ಸ್ಥೈರ್ಯ ಕಳೆದುಕೊಂಡಿರುತ್ತಾರೆ. ತಂದೆತಾಯಿಗಳು ಹಾಗೂ ಶಿಕ್ಷಕರು ಮಕ್ಕಳಿಗೆ ಮುಂದಿನ ಭವಿಷದ ಬಗ್ಗೆ ಮಾರ್ಗದರ್ಶನ ನೀಡುವ ಪ್ರಯತ್ನದಲ್ಲಿ ಶಿಕ್ಷಣ ನೀಡಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಪಿ. ನಾರಾಯಣಪ್ಪ ಗ್ರಾಮೀಣ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಶಿಕ್ಷಣದ ಬೋದನೆ ಬದಲಾಗಬೇಕಿದೆ. ಕೌಶಲ್ಯದ ಬಗ್ಗೆ ತಿಳಿಹೇಳುವ ಹಾಗೂ ಬದುಕಿಗೆ ಪೂರಕವಾಗುವ ಸೃಜನಾತ್ಮಕ ಚಟುವಟಿಕೆಗಳ ಶಿಕ್ಷಣ ಇಂದು ಅತ್ಯಗತ್ಯವಾಗಿ ಅನಿವಾರ್ಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಗೌರವಾಧ್ಯಕ್ಷ ಟಿ ಸುಬ್ಬರಾಮಯ್ಯ ಮಾತನಾಡುತ್ತಾ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದುಸದೃಢ ದೇಶ ಮತ್ತು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಶಿಕ್ಷಕರಿಂದ ಮಾತ್ರ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದರು.
ಜಿ ಶ್ರೀನಿವಾಸ್ ಮಾತಾನಾಡಿ ಶಿಕ್ಷಕರ ದಿನಾಚರಣೆಯಂದು ಕೆಲವು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಉಳಿದ ಶಿಕ್ಷಕರು ಅರ್ಹರಿಲ್ಲವಂತಲ್ಲ. ಪರದೆ ಮುಂದೆ ಬರದೇಯೂ ಅನೇಕ ಶಿಕ್ಷಕರು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲಾ ಶಿಕ್ಷಕರನ್ನು ಶ್ಲಾಘಿಸಿದರು.
ಉಪನ್ಯಾಸಕ ಕವಿಗಳಾದ ಡಾ. ಶರಣಪ್ಪ ಗಬ್ಬೂರು, ಸಿ. ರವೀಂದ್ರಸಿಂಗ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ ಶಿವಕುಮಾರ್, ನಿವೃತ್ತ ಪೋಲಿಸ್ ಅಧಿಕಾರಿ ರವೀಂದ್ರನಾಥ್, ಸಮಾಜ ಸೇವಕ ಶ್ರೀಧರ್, ಇಂಚರ ಸಂಸ್ಥೆಯ ಅಧ್ಯಕ್ಷ ಇಂಚರ ನಾರಾಯಣಸ್ವಾಮಿ, ಶಿಕ್ಷಕಿ ಮಂಜುಳ, ಕನಕ ನೌಕರರ ಬಳಗದ ಅಧ್ಯಕ್ಷ ಶಿವಕುಮಾರ್, ಕಲಾವಿದ ಚಿಟ್ನಹಳ್ಳಿ ರಾಮಚಂದ್ರ ಮುಂತಾದವರು ಭಾಗವಹಿಸಿ ಸಮಾರಂಭದಲ್ಲಿ ರಮೇಶ್ ಬಾಬು ಅವರನ್ನು ಆತ್ಮೀಯಯಾಗಿ ಅಭಿನಂದಿಸಲಾಯಿತು.