ಕೆಇಎ ಪ್ರಶ್ನೆಪತ್ರಿಕೆ ಸೋರಿಕೆಗೆ 40 ಲಕ್ಷ ರೂ.ಗಳು ನೀಡಿದ ಆರೋಪ: ವಸತಿ ನಿಲಯದ ವಾರ್ಡ್‍ನ್ ಬಂಧನ
ಕಲಬುರಗಿ:ಫೆ.26: ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಮೇಲ್ವಿಚಾರಕರಿಗೆ ಹಣ ನೀಡಿದ ಆರೋಪದ ಮೇಲೆ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಚಿಕ್ಕಬಳ್ಳಾಪುರದ ವೃತ್ತಿಪರ ವಸತಿ ನಿಲಯದ ವಾರ್ಡನ್ ಬಸವರಾಜ್ ಯಾಳವಾರ್ ಎಂಬಾತನಿಗೆ ಬಂಧಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಪ್ರಿನ್ಸಿಪಾಲ್‍ಗೆ 40 ಲಕ್ಷ ರೂ.ಗಳನ್ನು ನೀಡಿದ್ದ ಎಂದು ಸಿಐಡಿ ತನಿಖೆಯ ವೇಳೆ ಬಹಿರಂಗಗೊಂಡಿದೆ. ಆತನ ವಿರುದ್ಧ ನಗರದ ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತ. ಆಗ ಆತ ತಲೆ ಮರೆಸಿಕೊಂಡಿದ್ದ. ಈಗ ಸಿಐಡಿ ಪೋಲಿಸರು ಆತನಿಗೆ ಬಂಧಿಸಿದರು.
ಆರೋಪಿ ಬಸವರಾಜ್ ಯಾಳವಾರ್ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹಾಗೂ ನೆರೆಯ ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದು, ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಕೊನೆಗೆ ತನಿಖೆಯ ವೇಳೆ ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿರುವ ಕುರಿತು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆತನಿಗೆ ಬಂಧಿಸಿದ್ದಾರೆ. ಬಸವರಾಜ್ ಯಾಳವಾರ್ ಪ್ರಕರಣದಲ್ಲಿ 15ನೇ ಆಓಪಿಯಾಗಿದ್ದು, ಆತನಿಗೆ ವಶಕ್ಕೆ ತೆಗೆದುಕೊಂಡ ಸಿಐಡಿ ಪೋಲಿಸರು ವಿಚಾರಣೆ ಆರಂಭಿಸಿದ್ದಾರೆ.
ಇಂಗ್ಲೀಷ್‍ನಲ್ಲಿ ಎಂಎಬಿಇಡಿ ಪದವೀಧರನಾಗಿರುವ ಬಸವರಾಜ್ ಯಾಳವಾರ್ ಕಳೆದ 19ರಂದು ವಾರ್ಡನ್ ಕೆಲಸಕ್ಕೆ ಸೇರಿದ್ದ ಎಂದು ತಿಳಿದುಬಂದಿದೆ. ಈಗ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗುವಂತಾಗಿದೆ.