ರಾಜ್ಯ ಮಟ್ಟದ ಮರುಳು ಶಂಕರದೇವ ಪ್ರಶಸ್ತಿಗೆಡಾ. ಸುರೇಶ ಜಂಗೆ ಆಯ್ಕೆ
ಕಲಬುರಗಿ:ಫೆ.26: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ನೀಡುವ 2023-24ನೇ ಸಾಲಿನ ರಾಜ್ಯ ಮಟ್ಟದ ಮರುಳು ಶಂಕರದೇವ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ ಜಂಗೆ ಆಯ್ಕೆಯಾಗಿದ್ದಾರೆ.
ಡಾ. ಸುರೇಶ ಜಂಗೆ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಗ್ರಂಥಾಲಯ ಕ್ಷೇತ್ರದಲಿನ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಶಬನಮ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಅಧಕ್ಷೆ ಡಾ. ಮುಕ್ತುಂಬಿ ಎಂ ಪ್ರಕಟಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುರೇಶ ಜಂಗೆ ಅವರು ಬೀದರ್ ಜಿಲ್ಲೆ ಹಾಗೂ ತಾಲ್ಲೂಕಿನ ಬಸವಕಲ್ಯಾಣದವರಾಗಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅಮೇರಿಕಾ, ಲಂಡನ್, ಸ್ವೀಡನ್, ಡೆನ್ಮಾರ್ಕ್, ಸಿಂಗಾಪೂರ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಮಸ್ಕಟ್, ದುಬೈ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇಂಟರ್‍ನ್ಯಾಷನಲ್ ಫೆಡರೇಷನ್ ಆಪ್ ಲೈಬ್ರರಿ ಅಸೋಷಿಯೇಷನ್ಸ್ ಮತ್ತು ಇನ್ಸ್ಟಿಟ್ಯೂಷನ್ ಫೆಲೋ ಹಾಗೂ ಕಾಮನ್ ವೆಲ್ತ್ ಫೆಲೋ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ.
ಗ್ರಂಥಾಲಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 120ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಿಸಿರುತ್ತಾರೆ. ಸುಮಾರು 447 ಸೈಟೇಷನ್‍ಗಳಿದ್ದು, 6 ಪುಸ್ತಕಗಳು ಹಾಗೂ 7 ಪುಸ್ತಕಗಳನ್ನು ಸಂಪಾದಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆಹ್ವಾನಿತ ಉಪನ್ಯಾಸಗಳನ್ನು ನೀಡಿರುತ್ತಾರೆ. ಗುಲಬರ್ಗಾ ವಿಶ್ವವಿದ್ಯಾಲಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಚಟುವಟಿಕೆಗಳಿಗೆ ಆಕರ ಗ್ರಂಥಗಳು, ಪೂರಕ ಸಂಪನ್ಮೂಲ ಒದಗಿಸಿ ಪ್ರೋತ್ಸಾಹಿಸುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹಲವು ಗ್ರಂಥಾಲಯ ಸಂಘಗಳ ಮತ್ತು ಸಂಸ್ಥೆಗಳಿಗೆ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.