ರಾಜಾ ವೆಂಕಟಪ್ಪ ನಾಯಕ್‍ರಿಗೆ ಲೋಕಸಭೆಗೆ ಟಿಕೆಟ್ ಕೊಡಬೇಕು ಎಂದುಕೊಂಡಿದ್ದೆವು: ಖರ್ಗೆ
ಕಲಬುರಗಿ:ಫೆ.26: ಈ ಬಾರಿಯ ಲೋಕಸಭಾ ಚುನಾವಣೆಗೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಕರೆಸಿಕೊಳ್ಳಬೇಕೆಂದಿದ್ದವು ಎಂದು ಎಐಸಿಸಿ ಹಾಗೂ ಇಂಡಿಯಾ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದರು.
ಭಾನುವಾರ ಅಗಲಿದ ಸುರಪುರ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೋಮವಾರ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಾ ವೆಂಕಟಪ್ಪ ನಾಯಕ್ ನನಗೆ ಪ್ರತಿಯೊಂದು ಚುನಾವಣೆಯಲ್ಲಿ ಕರೆಯುತ್ತಿದರು. ನಾವು ನೀಡಿರುವ ಕೆಲಸ ಚಾಚು ತಪ್ಪದೆ ಮಾಡುತ್ತಿದರು. ಈ ಬಾರಿ ಅವರಿಗೆ ಲೋಕಸಭೆಗೆ ಕರೆಸಿಕೊಂಡು ಟಿಕೆಟ್ ಕೊಡಬೇಕು ಎಂದುಕೊಂಡಿದ್ದೆವು. ಆದಾಗ್ಯೂ, ವಿಷಯ ಬಹಿರಂಗಪಡಿಸಿರಲಿಲ್ಲ. ಅವರ ಆಕಸ್ಮಿಕ ನಿಧನವು ನಮಗೆ ತುಂಬಲಾಗದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.
ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಲ್ಲದೇ ಅವರ ತಂದೆಯೂ ಸಹ ಶಾಸಕರಾದವರು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಅವರ ತಂದೆ ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ತಂದೆಯಂತೆಯೇ ಪುತ್ರ ರಾಜಾ ವೆಂಕಟಪ್ಪ ನಾಯಕ್ ಅವರೂ ಸಹ ಪಕ್ಷಕ್ಕೆ ನಿಷ್ಠರಾಗಿದ್ದರು. ನನಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲು ಕರೆಯುತ್ತಿದ್ದರು. ಅವರೊಂದಿಗೆ ನನ್ನ ಒಡನಾಟ ಬಹಳಷ್ಟು ಆತ್ಮೀಯವಾಗಿತ್ತು. ಅವರ ನಿಧನದ ದು:ಖವನ್ನು ಅವರ ಕುಟುಂಬಕ್ಕೆ ಸಹಿಸುವ ಶಕ್ತಿಯನ್ನು ಕೊಡಲಿ ಎಂದು ಖರ್ಗೆಯವರು ಪ್ರಾರ್ಥಿಸಿದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆಯವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಸರ್ಕಾರಿ ಸಂಸ್ಥೆಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರಿ ಏಜೆನ್ಸಿಗಳನ್ನು ದುರಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವದಲ್ಲಿ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಸರ್ಕಾರಿ ಯಂತ್ರಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದರು.
ನಾವು ಮತದಾರರನ್ನು ಉಳಿಸಿಕೊಳ್ಳಿಸಿಕೊಳ್ಳಲು ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ ಸೇರಿ ವಿವಿಧ ರಾಜ್ಯಗಳಲ್ಲಿ ಮತ್ತು ಜಾರ್ಖಂಡನಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಬಿಹಾರ್‍ದಲ್ಲಿ ಆರ್‍ಜೆಡಿ, ತಮಿಳ್ನಾಡಿನಲ್ಲಿ ಡಿಎಂಕೆ, ಮುಸ್ಲಿಮ್ ಲೀಗ್ ಮುಂತಾದ ಪಕ್ಷಗಳೊಂದಿಗೆ ಇಂಡಿಯಾ ಒಕ್ಕೂಟವು ಹೊಂದಾಣಿಕೆ ಮಾಡಿಕೊಂಡಿದ್ದು ಶೀಘ್ರ ಅದನ್ನು ಬಹಿರಂಗ ಪಡಿಸಬೇಕಿದೆ. ನಾವು ಒಕ್ಕೂಟ ಮೈತ್ರಿ ಪಕ್ಷಗಳು ಒಟ್ಟುಗೂಡಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಯಾರಾದರೂ ಅಹಂನಿಂದ ಮಾತಾಡಿದರೆ ಜನ ಅವರಿಗೆ ಪಾಠ ಕಲಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿನ ಅಧಿಕಾರವು ಇದು ಯಾರೋ ಒಬ್ಬರ ಕೈಯಲ್ಲಿ ಇಲ್ಲ. ನೀವು ಸರ್ಕಾರಿ ಸಂಸ್ಥೆಯನ್ನು ದುರಪಯೋಗ ಮಾಡಿಕೊಳ್ಳುತ್ತಿರುವ ಕುರಿತು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದ ಅವರು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚವ್ಹಾಣ್ ಅವರು 371(ಜೆ) ಹೊಂದಿರುವ ಕಲಬುರ್ಗಿಗೆ ಕೇಂದ್ರದಿಂದ 10 ಸಾವಿರ ಕೋಟಿ ರೂ.ಗಳನ್ನು ಕೊಡಿಸಿ ಈ ಭಾಗವನ್ನು ಉದ್ಧಾರ ಮಾಡುವ ಬಗ್ಗೆ ಮಾತನಾಡಬೇಕು, ಸುಮ್ಮನೆ ಟೀಕೆ ಮಾಡಿ ಹೊಗುವುದಲ್ಲ. ಬಿಜೆಪಿ ಸಚಿವರಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವುದು ಮಾತ್ರ ಗೊತ್ತು. ನಮ್ಮನ್ನು ಎದುರಿಸಲು ಕಷ್ಟವಾಗುತ್ತಿರುವುದರಿಂದ ಈ ರೀತಿ ಮತನಾಡುತ್ತಾರೆ ಎಂದು ಖರ್ಗೆಯವರು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.