ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಸ್ಥಳ ನಿಯೋಜನೆ ಕೌನ್ಸಲಿಂಗ್ ಮೂಲಕ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ ಚಾಲನೆ
ಕಲಬುರಗಿ:ಫೆ.26: ಫೆಬ್ರುವರಿ 26 ರಿಂದ 28 ರವರೆಗೆ ನಡೆಯುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 925 ಚಾಲಕ ಹಾಗೂ 694 ಚಾಲಕ ಕಂ ನಿರ್ವಾಹಕ ಒಟ್ಟು 1619 ಹುದ್ದೆಗಳಿಗೆ ಸ್ಥಳ ನಿಯೋಜನೆ ಕೌನ್ಸಲಿಂಗ್ ಮೂಲಕ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ ಚಾಲನೆ ನೀಡಿದರು
ಸೋಮವಾರದಂದು ಆರ್ಚಿಡ್ ಮಾಹಲ್ ಕಟ್ಟಡದ ಹಿಂಬಾಗದಲ್ಲಿ ನಿಗಮದ ಕಟ್ಟಡದಲ್ಲಿ ಗಣಕೀಕೃತ ಕೌನ್ಸಲಿಂಗ್ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೌನ್ಸಲಿಂಗ್ ಕೂಡ ಅತ್ಯಂತ ಪಾರದರ್ಶಕವಾಗಿದ್ದು, ನಿಗಮದ ಘಟಕಗಳಲ್ಲಿ ಖಾಲಿ ಇರುವ ಸ್ಥಳಗಳ ಮಾಹಿತಿಯನ್ನು ದೊಡ್ಡ ಪರದೆಯಲ್ಲಿ ಗಣಕೀಕೃತ ಮೂಲಕ ಆನ್ ಲೈನ್ ನಲ್ಲಿ ಅಭ್ಯರ್ಥಿಗಳಿಗೆ ಕ್ಷಣವಾರು ಮಾಹಿತಿ ನೀಡುತ್ತ ಅವರೇ ಖುದ್ದಾಗಿ ಸ್ಥಳ ಆಯ್ಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಒಂದು ಪಾರದರ್ಶಕ ನೇಮಕಾತಿಯ ಬಗ್ಗೆ ಅಭ್ಯರ್ಥಿಗಳೊಂದಿಗೆ ಸಂವಾದ ಮಾಡಿ ಹರ್ಷ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ರವರು ಸ್ವಾಗತಿಸಿ ಮಾತನಾಡಿ, ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದ್ದು ದೇಶದಲ್ಲಿಯೇ ಮಾದರಿಯಾಗಿರುತ್ತದೆ ಎಂದರು.
ರಾಜ್ಯ ಮತ್ತು ಇತರ ರಾಜ್ಯಗಳಿಂದ ನೇಮಕಾತಿ ಪ್ರಕ್ರಿಯೆ ವ್ಯವಸ್ಥಾಪನೆಯನ್ನು ನೋಡಲು ಅಧಿಕಾರಿಗಳು ಬರುತ್ತಿದ್ದಾರೆ. ಕರಾರಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಈ ವ್ಯವಸ್ಥೆಯನ್ನು ಕಂಡು ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ಅವರಲ್ಲಿಯೆ ನೇಮಕಾತಿಯನ್ನು ಇದೇ ವ್ಯವಸ್ಥೆಯಲ್ಲಿ ಸಾಧ್ಯವಾದರೆ ಇದೇ ಸ್ಥಳದಲ್ಲಿ ಮಾಡುವುದಾಗಿ ತಿಳಿಸಿರುತ್ತಾರೆ ಎಂದರು.
ಮಾರ್ಚ 2 ರಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುದ್ದೆಗಳ ಆದೇಶ ಪತ್ರಗಳನ್ನು ನೀಡುವರು ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ ವಿ.ಎಸ್., ಮುಖ್ಯ ತಾಂತ್ರಿಕ ಶಿಲ್ಪಿ ಸಂತೋಷ ಗೊಗೇರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದ್ರಕಳ್ಳಿ, ಉಪ-ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಮಲ್ಲಿಕಾರ್ಜುನ ದೇಗಲಮಡಿ, ಮುಖ್ಯ ಲೆಕ್ಕಧಿಕಾರಿ ಆರ್ಥಿಕ ಸಲಹೆಗಾರರಾದ ಬಸವರಾಜ, ಮುಖ್ಯ ಕಾನೂನು ಅಧಿಕಾರಿ ಭಾವಿಕಟ್ಟಿ, ಉಪಮುಖ್ಯ ಲೆಕ್ಕಧಿಕಾರಿ ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.