ಮಟಕಾ, ಜೂಜಾಟ: 13 ಜನರ ಬಂಧನ
ಕಲಬುರಗಿ,ಫೆ.26-ನಗರದ ಎಸ್.ಟಿ.ಬಿ.ಟಿ.ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು, ಗಂಜ್ ಏರಿಯಾದಲ್ಲಿ ಜೂಜಾಡುತ್ತಿದ್ದ 6 ಜನ ಮತ್ತು ಕವಲಗಾ (ಬಿ) ಸೀಮಾಂತರದಲ್ಲಿ ಜೂಜಾಟವಾಡುತ್ತಿದ್ದ 6 ಜನ ಸೇರಿ 13 ಜನರನ್ನು ಬಂಧಿಸಿರುವ ಪೊಲೀಸರು 35,250 ರೂ.ನಗದು ಜಪ್ತಿ ಮಾಡಿದ್ದಾರೆ.
ನಗರದ ಎಸ್.ಟಿ.ಬಿ.ಟಿ.ಸರ್ಕಲ್ ಹತ್ತಿರ ಮಟಕಾ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ ಶಹಾಬಜಾರ ತಾಂಡಾದ ಅನೀಲ ಶಂಕರ ಜಾಧವ್ ಎಂಬಾತನನ್ನು ಬಂಧಿಸಿ 1250 ರೂ.ನಗದು ಮತ್ತು ಮಟಕಾ ಚೀಟಿ ಜಪ್ತಿ ಮಾಡಿದ್ದಾರೆ.
ನಗರದ ಗಂಜ್ ಏರಿಯಾದ ಹೋಟೆಲ್ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಪುಲ್ಲಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬಸವರಾಜ ಹಿರೇಗೌಡ, ಲಿಂಗರಾಜ ದೇವಣಿ, ಆನಂದ ಪಾಟೀಲ, ಸಿದ್ರಾಮಪ್ಪ ಗಾಜರೆ, ಜಗದೀಶ ಪಾಟೀಲ ಎಂಬುವವರನ್ನು ಬಂಧಿಸಿ 23,280 ರೂ.ನಗದು, ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಕವಲಗಾ (ಬಿ) ಸೀಮಾಂತರದ ಸರ್ಕಾರಿ ಶಾಲೆ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ ಬೀರಪ್ಪ ಗುಡೂರ, ಮಂಜು ಲಗಶೆಟ್ಟಿ, ಕೆಂಚಪ್ಪ ಪೂಜಾರಿ, ರಮೇಶ ಮ್ಯಾಕೇರಿ, ನೀಲಕಂಠಯ್ಯ ಮತ್ತು ಚಂದ್ರಕಾಂತ ಮುಸಂಡಿ ಎಂಬುವವರನ್ನು ಬಂಧಿಸಿ 10,720 ರೂ.ನಗದು ಮತ್ತು ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಬ್ರಹ್ಮಪುರ, ಚೌಕ್ ಮತ್ತು ಫರಹತಾಬಾದ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.