ರೋಟರಿಯಿಂದ ಮೊಬೈಲ್ ಡೆಂಟಲ್ ವ್ಯಾನ್ ಕೊಡುಗೆ
ಬೀದರ್: ಫೆ.26:ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ನೌಬಾದನ ಎಸ್.ಬಿ. ಪಾಟೀಲ ದಂತ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ ರೂ. 32 ಲಕ್ಷ ಮೌಲ್ಯದ ಸ್ಮೈಲ್ ಎಕ್ಸಪ್ರೆಸ್ ಹೆಸರಿನ ಮೊಬೈಲ್ ಡೆಂಟಲ್ ವ್ಯಾನ್ ಕೊಡುಗೆಯಾಗಿ ನೀಡಿದೆ.
ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ಕಪಿಲ್ ಪಾಟೀಲ ಅವರು ಕಾಲೇಜು ಅಧ್ಯಕ್ಷ ಸೂರ್ಯಕಾಂತ ಜಿ. ಪಾಟೀಲ ಅವರಿಗೆ ವ್ಯಾನ್ ಬೀಗದ ಕೈ ಹಸ್ತಾಂತರಿಸಿದರು.
ಬಡ ರೋಗಿಗಳ ಹಿತ ಗಮನದಲ್ಲಿ ಇಟ್ಟಕೊಂಡು ನೀಡಲಾದ ಮೊಬೈಲ್ ಡೆಂಟಲ್ ವ್ಯಾನ್ ಅನ್ನು ಕಾಲೇಜು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಾಟೀಲ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ದಂತ ವೈದ್ಯಕೀಯ ಶಿಬಿರಗಳ ಆಯೋಜನೆಗೆ ನೆರವಾಗಲು ಕಾಲೇಜಿಗೆ ಗ್ಲೊಬಲ್ ಗ್ರ್ಯಾಂಟ್ ಯೋಜನೆ, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160, 3150 ಹಾಗೂ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 6540 ವ್ಯಾಪ್ತಿಯ ಅಮೆರಿಕದ ರೋಟರಿ ಕ್ಲಬ್ ಆಫ್ ಅಲ್ಬಿಯನ್ ಸಹಯೋಗದಲ್ಲಿ ಮೊಬೈಲ್ ಡೆಂಟಲ್ ವ್ಯಾನ್ ಕೊಡಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3150 ಮಾಜಿ ಗವರ್ನರ್ ರವಿ ವದ್ಲಮನಿ ಹೇಳಿದರು.
ಹವಾ ನಿಯಂತ್ರಿತ ವ್ಯಾನ್ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಜನರೇಟರ್ ಒಳಗೊಂಡಿದೆ. ಏಕಕಾಲಕ್ಕೆ ಇಬ್ಬರು ರೋಗಿಗಳಿಗೆ ಚಿಕಿತ್ಸೆ ಕೊಡಬಹುದಾಗಿದೆ. ಏಳು ವೈದ್ಯರು ವ್ಯಾನನಲ್ಲಿ ಕುಳಿತು ಸಂಚರಿಸಬಹುದಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಮಾಣಿಕ ಎಸ್. ಪವಾರ್ ತಿಳಿಸಿದರು.
ಡಾ. ರಘು ಕೃಷ್ಣಮೂರ್ತಿ ಅವರು ವ್ಯಾನ್ ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದನ್ನು ವಿವರಿಸಿದರು.
ರೋಟರಿ ಮಾಜಿ ಗವರ್ನರಗಳಾದ ಕೆ.ಸಿ. ಸೇನನ್, ರಾಜಶೇಖರ ರೆಡ್ಡಿ, ರೋಟರಿ ಕಲ್ಯಾಣ ಝೋನ್ ಅಸಿಸ್ಟಂಟ್ ಗವರ್ನರ್ ಡಾ. ವಸಂತ ಪವಾರ್, ಪ್ರಾಚಾರ್ಯ ಡಾ. ಶೈಲೇಂದ್ರ ಮಾಶಾಳಕರ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಶಿವಕುಮಾರ ಪಾಖಾಲ್, ನಿತಿನ್ ಕರ್ಪೂರ, ಡಾ. ರಿತೇಶ ಸುಲೆಗಾಂವ್, ಸೂರ್ಯಕಾಂತ ರಾಮಶೆಟ್ಟಿ, ಚೇತನ್ ಮೇಗೂರ್ ಮೊದಲಾದವರು ಇದ್ದರು.