ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಹಿರಿದು:ಡಾ.ಮಳಲಿ
ಸೈದಾಪುರ:ಫೆ.26:ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲು ಗುರು ಎಂಬ ಮಾತಿನಂತೆ ಪ್ರತಿಯೊಂದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹು ಮುಖ್ಯವಾಗಿದೆ ಎಂದು ಪಾರಂಪರಿಕ ಪ್ರಸಿದ್ಧ ವೈದ್ಯ ಡಾ.ಹಣಮಂತ ಮಳಲಿ ಹೇಳಿದರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯ ವಾಸವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಾತೃ ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಕ್ಷರ ಜ್ಞಾನ ಒಂದೇ ಶಿಕ್ಷಣವಲ್ಲ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿ ಹಾಗೂ ಸಕರಾತ್ಮಕ ವ್ಯಕ್ತಿತ್ವನ್ನು ರೂಪುಗೊಳಿಸುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿರುತ್ತದೆ. ಪಾಲಕರಾದ ನಾವು ನುಡಿದಂತೆ ನಡೆದು ಅದೇ ದಾರಿಯಲ್ಲಿ ನಮ್ಮ ಮಕ್ಕಳೂ ನಡೆಯುವಂತೆ ನೋಡಿಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಮೊಬೈಲ್ ಹಾಗೂ ಟಿವಿ ಬಳಕೆ ಹೆಚ್ಚಾಗಿದ್ದು ಇದರಿಂದ ವಿದ್ಯಾರ್ಥಿಗಳು ತಪ್ಪು ದಾರಿ ತುಳಿಯುತ್ತಿದ್ದಾರೆ. ಈ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ, ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸುವ ವಾತವರಣ ಸೃಷ್ಠಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ತಾಯಂದಿರು ಮಕ್ಕಳಿಗೆ ಕೈ ತುತ್ತು ನೀಡಿದರು. ನಂತರ ತಾಯಂದಿರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಒಂದು ದಿನ ತಾಯಂದಿರು ಎಲ್ಲ ಮರೆತು ಮಕ್ಕಳಾಗಿ ಆಟದಲ್ಲಿ ಭಾಗವಹಿಸಿ ಸಂತೋಷಪಟ್ಟರು.
ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಾದಾಮಿ, ಕಾರ್ಯದರ್ಶಿ ವೆಂಕಟೇಶ ಪಾಲಾದಿ, ಆರ್ಯ ವೈಶ್ಯ ಸೇವಾ ಸಂಘದ ಕಾರ್ಯದರ್ಶಿ ವೆಂಕಟೇಶ ಪುರಿ, ಸತ್ಯನಾರಾಯಣ ಪತ್ತಿ, ಕೆಬಿ ನಾಗರಾಜ, ಶ್ವೇತಾ ಪುರಿ, ಮುಖ್ಯಗುರು ಬಿ.ಬಿ.ವಟವಟ್, ಹಿರಿಯ ಶಿಕ್ಷಕಿ ರಾಧ ಸಂಗೋಳಿಗಿ, ಕಾಸಿಂಬಿ.ಐ.ಕೋನಂಪಲ್ಲಿ, ಸಂತೋಷ ದೇಸಾಯಿ, ಕಾಶಿನಾಥ ಶೆಟ್ಟಿಹಳ್ಳಿ, ಮಹೇಶ ಕೊಂಡಾಪುರ, ದೇವೇಂದ್ರಕುಮಾರ ಬಾಗ್ಲಿ, ಚಂದ್ರಕಲಾ, ಸೃತಿ ಜಾರ್ಜ್, ಬಸಮ್ಮ ಕಲಬುರಗಿ ಸೇರಿದಂತೆ ಇತರರಿದ್ದರು.