“ಪ್ರತಿಭೆ ಜೊತೆ ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಸಾಧ್ಯ” : ಅಮರವಾಡಿ
ಔರಾದ್ :ಫೆ.26: ಸಾಧನೆಗೆ ಪ್ರತಿಭೆ ಇದ್ದರೆ ಸಾಲದು ಜೊತೆಯಲ್ಲಿ ಪ್ರಯತ್ನ ಕೂಡ ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಎಕಲಾರ ಶಾಲೆ ಶಿಕ್ಷಕ ಯುವ ಸಾಹಿತಿ ಬಿ.ಎಂ ಅಮರವಾಡಿ ಅಭಿಪ್ರಾಯಪಟ್ಟರು.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುವ ಸಮೂಹ ಯಾವುದೇ ಕ್ಷೇತ್ರದಲ್ಲಿ ತಾಳ್ಮೆ ಇಲ್ಲದೇ ವಿಫಲವಾಗುತ್ತಿರುವ ನೋಡಬಹುದಾಗಿದೆ.
ಹಿಂದಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವುದಾದರೆ ಸಾಧಕರೆಲ್ಲರೂ ನಿರಂತರ ಪ್ರಯತ್ನದ ಜೊತೆಗೆ ತಾಳ್ಮೆಯಿಂದ ನಡೆದುಕೊಂಡಿದ್ದರು. ಉಸೇನ್ ಬೋಲ್ಟ್ 9 ಸೆಕೆಂಡ್‍ನಲ್ಲಿ 100ಮೀ ಓಡಿ ಎರಡು ಸಲ ಚಿನ್ನದ ಪದಕ ಪಡೆದದ್ದು ರೋಚಕವಾಗಿದೆ.
ಪತ್ರಕರ್ತರೊರ್ವರು ಈ ಸಾಧನೆಯ ಕುರಿತು ಬೋಲ್ಟ್ರನ್ನು ಪ್ರಶ್ನಿಸಿದಾಗ 9 ಸೆಕೆಂಡ್ ಓಡಲು 4 ವರ್ಷ ಪ್ರಯತ್ನ ಪಟ್ಟಿರುವೆ. ತಾಳ್ಮೆ ಇಲ್ಲದೇ ಜಗತ್ತಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಪಂಚದ ಯುವ ಸಮೂಹಕ್ಕೆ ಸಾಧನೆ ಮಾಡಲು ಹೊರಟವರಿಗೆ ಬೋಲ್ಟ್ ಕೇವಲ ಎರಡು ಮಾತು ಹೇಳುತ್ತಾರೆ. ನಿರಂತರ ಪ್ರಯತ್ನ ಮತ್ತು ತಾಳ್ಮೆ ಹೊಂದಿರುವ ವ್ಯಕ್ತಿಗಳು ಸುಲಭವಾಗಿ ಏನನ್ನೂ ಸಾಧಿಸಬಹುದು ಎಂಬ ಕಿವಿಮಾತು ಹೇಳಿದ್ದಾರೆ ಎಂದರು.