ಸ್ಲಂ ಬೋರ್ಡ್ ಮನೆಗಳ ಕಾಮಗಾರಿ ಪರಿಶೀಲನೆ
ಹುಬ್ಬಳ್ಳಿ,ಫೆ.26: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಉತ್ತರ ಕರ್ನಾಟಕ ಜಿಲ್ಲೆಯ ಮುಂಡುಗೋಡದಲ್ಲಿ 907 ಮತ್ತು ಯಲ್ಲಾಪುರದಲ್ಲಿ 578 ಜಿ-2 ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ(ಸ್ಲಂ ಬೋರ್ಡ್) ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು, ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಅವರೊಂದಿಗೆ ಪರಿಶೀಲನೆ ಮಾಡಿದರು.
ಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಗಳಿಂದ ಮಾಹಿತ ಪಡೆದ ಸ್ಲಂ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು, ಬರುವ ತಿಂಗಳು ಮನೆಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮರೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ಬಾಕಿ ಇರುವ ಕಾಮಗಾರಿಯನ್ನು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಮನೆ ಹಸ್ತಾಂತರಕ್ಕೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಬ್ಬಯ್ಯ ಅವರು, ರಾಜ್ಯದಾದ್ಯಂತ ನಿರ್ಮಾಣಗೊಳ್ಳುತ್ತಿರುವ 180253 ಮನೆಗಳ ಪೈಕಿ 36786 ಮನೆಗಳನ್ನು ವಸತಿ ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಮಾರ್ಚ್ 2ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಹಸ್ತಾಂತರ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಮುಂಡಗೋಡ ಮತ್ತು ಯಲ್ಲಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಅಂತಿಮ ಹಂತದ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮನೆಗಳು ಹಂಚಿಕೆಗೆ ಸಿದ್ಧಗೊಂಡಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಶಾಸಕರಾದ ಶಿವರಾಮ ಹೆಬ್ಬಾರ್, ಸ್ಲಂ ಬೋರ್ಡ್ ಧಾರವಾಡ ವೃತ್ತ, ತಾಂತ್ರಿಕ ನಿರ್ದೇಶಕ ಎಂ.ಎಲ್. ಲಮಾಣಿ, ಕಾರ್ಯಪಾಲಕ ಅಭಿಯಂತರರಾದ ಬಿ.ಎಸ್. ಶಂಭುಲಿಂಗಪ್ಪ, ಸಹಾಯಕ ಅಭಿಯಂತರರಾದ ಪ್ರತೀಕ ದಳವಾಯಿ, ಮುಖಂಡರಾದ ನಾಗರಾಜ ದೈವಜ್ಞ, ಬಸವರಾಜ ಲಮಾಣಿ, ಪರಶುರಾಮ ತಹಶೀಲ್ದಾರ್, ಅನ್ನುಕುಮಾರ್, ರಾಜಶೇಖರ ನಾಯಕ್, ಶ್ರೀನಿವಾಸ ದೈವಜ್ಞಾ, ವೈ.ಟಿ. ಭುಜಂಗಿ ಸೇರಿದಂತೆ ಮೊದಲಾದವರು ಇದ್ದರು.