ಧರ್ಮ ನಮ್ಮ ಉಸಿರು
ಬ್ಯಾಡಗಿ,ಫೆ.26: ನಾವೆಲ್ಲರೂ ನಮ್ಮ ಧರ್ಮವನ್ನು ಗೌರವಿಸಬೇಕು, ಧರ್ಮ ಎಂದರೆ ನಮ್ಮ ಉಸಿರು ಇದ್ದಂತೆ, ಅದನ್ನು ಬಿಟ್ಟು ಇರಲು ಸಾಧ್ಯವೇ, ಧರ್ಮ ಬಿಟ್ಟು ಕೂಡಾ ಇರಲು ಅಸಾಧ್ಯವೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದರು.
ಅವರು ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ಬೇಡರ ಕಣ್ಣಪ್ಪ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಜೀವನದಲ್ಲಿ ಕ್ರಿಯಾಶೀಲನಾಗಿದ್ದು, ಯಾರನ್ನೂ ನೋಯಿಸದೆ, ನೀಚರಿಗೆ ತಲೆಭಾಗದೆ, ಸಜ್ಜನರ ಮಾತು ಮೀರದಿರುವ ಗುಣಗಳನ್ನು ಮೈಗೂಡಿಸಿಕೊಂಡು ಅನಂತವಾದ ಸಾಧನೆ ಮಾಡಬೇಕಾಗಿದೆ. ಭೌತಿಕ ಸಂಪತ್ತು ಬರಬಹುದು ಹೋಗಬಹುದು. ಆದರೆ ಆಧ್ಯಾತ್ಮ ಸಂಪತ್ತು ಶಾಶ್ವತ. ಸುಖ ಶಾಂತಿ ಬದುಕಿಗೆ ಒಳ್ಳೆಯ ಗುಣಗಳೇ ನಿಜವಾದ ಆಸ್ತಿ. ನಾವು ಮಾಡುವ ಕಾಯಕವೇ ನಮ್ಮ ಧರ್ಮ, ನಾವು ನಡೆದುಕೊಳ್ಳುವ ರೀತಿಯೇ ನಮ್ಮ ಧರ್ಮ, ಹಾಗಾಗಿ ಅದನ್ನು ಗೌರವಿಸಲೇಬೇಕಾಗಿದೆ. ಇಲ್ಲಿನ ಬೇಡರ ಕಣ್ಣಪ್ಪ ದೇವಸ್ಥಾನ ಮುಂದೊಂದು ದಿನ ಸುತ್ತಮುತ್ತಲಿನ ಹಳ್ಳಿಗರಿಗೆ ಪ್ರವಾಸಿ ತಾಣವಾಗಿ
ಬೆಳೆಯುವಂತೆ ಆಗಲಿ ಎಂದು ಹಾರೈಸಿದರು.
ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಮಾಜದ ಸ್ವಾಸ್ಥ್ಯಕ್ಕೆ ಕೆಲವು ನಿಯಮಗಳನ್ನು ಮಾಡಿಕೊಂಡಿದ್ದೇವೆ.
ತಮ್ಮ ಬದುಕಿನಲ್ಲಿ ಯಶಸ್ಸು ಗಳಿಸಬೇಕು, ಪ್ರಗತಿ ಹೊಂದಬೇಕು ಎಂಬ ಆಸೆ ಎಲ್ಲರಲ್ಲೂ ಇರುವುದು ಸಹಜ. ಈ ಕನಸು ಈಡೇರಲು ಸಾಕಷ್ಟು ಶ್ರಮ ವಹಿಸಬೇಕು. ಪ್ರಾಮಾಣಿಕತೆಯಿಂದ ಹೆಜ್ಜೆ ಇಡಬೇಕು. ಒಂದಷ್ಟು ತ್ಯಾಗಗಳನ್ನೂ ಮಾಡಬೇಕು. ಬರೀ ಅಷ್ಟೇ ಅಲ್ಲ, ಶ್ರಮ, ಪ್ರಾಮಾಣಿಕತೆ, ತ್ಯಾಗದ ಜತೆಗೆ ಒಂದಷ್ಟು ಗುಣಗಳನ್ನೂ ನಾವು ರೂಢಿಸಿಕೊಳ್ಳಬೇಕು. ಆಗ ಯಾವುದೇ ಕ್ಷೇತ್ರದಲ್ಲೂ ಪ್ರಗತಿ ಹೊಂದಲು ಸಾಧ್ಯ ಎಂದರು.
ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ದೇವಸ್ಥಾನಕ್ಕೆ ಸಹಾಯ ಮಾಡಿದ ದಾನಿಗಳನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್. ಆರ್.ಪಾಟೀಲ, ದೇವಸ್ಥಾನ ಕಮಿಟಿಯ ಅಧ್ಯಕ್ಷ ಕಲ್ಲಪ್ಪ ಕದರಮಂಡಲಗಿ, ತಿಮ್ಮಣ್ಣ ಚಿಗರಿ, ಕಲ್ಲಪ್ಪ ಗ್ರಾಪಂ ಅಧ್ಯಕ್ಷ ಈರಣ್ಣ ಹಿರೇಮಠ, ಮಂಜುನಾಥ ಭರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.