ರಾಜ್ಯಕ್ಕೆ ಪ್ರಥಮಸ್ಥಾನ ಗಳಿಸುವುದು ಜಿಲ್ಲಾಡಳಿತದ ಉದ್ದೇಶ
ಚಿಕ್ಕಬಳ್ಳಾಪುರ.ಫೆ೨೬:ಜಿಲ್ಲೆಯ ೬ ತಾಲೂಕಿನಲ್ಲಿ ೨೦೨೩-೨೪ನೇ ಸಾಲಿನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪರೀಕ್ಷೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಉತ್ತಮ ಫಲಿತಾಂಶ ತರಲು ಯೋಜನೆ ರೂಪಿಸಲಾಗಿದೆ ಎಂದು ಡಿಡಿಪಿಐ ಬೈಲಾಂಜಿನಪ್ಪ ತಿಳಿಸಿ.
ಜಿಲ್ಲೆಯ ೬ ತಾಲೂಕಿನಲ್ಲಿ ಈ ಬಾರಿ ೫೨ ಪರೀಕ್ಷಾ ಕೇಂದ್ರಗಳನ್ನು ಮಾತ್ರ ಗುರುತಿಸಲಾಗಿದ್ದು,ಇದರಲ್ಲಿ ೧೧ ಪರೀಕ್ಷಾ ಕೇಂದ್ರಗಳಲ್ಲಿ ಸಂಪೂರ್ಣ ಸಿಸಿ ಟಿವಿ ಕಣ್ಗಾವಲಿರಲಿದೆ. ಉಳಿದ ೪೧ ಕೇಂದ್ರಗಳಲ್ಲಿ ಭಾಗಶ: ಅಂದರೆ ಪ್ರಶ್ನೆ ಪತ್ರಿಕೆ ತೆರೆಯುವ ಕೊಠಡಿ ಮತ್ತು ಪರೀಕ್ಷಾ ಕೇಂದ್ರದ ಹೊರಾವರಣದಲ್ಲಿ ಸಿಸಿ ಕೆಮೆರಾ ಇರಲಿದ್ದು ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಸುಗಮ ಪರೀಕ್ಷೆ..
ಈ ಸಂಬಂಧ ರಾಜ್ಯ ಮಟ್ಟದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವರು, ಆಯುಕ್ತರು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ,ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಸಭೆ ನಡೆಸಿದ್ದು ಸಗಮವಾಗಿ ಪರೀಕ್ಷೆಗಳು ನಡೆಯುವ ಸಂಬಂಧ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿಯೂ ಕೂಡ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ.ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಉತ್ತಮ ಫಲಿತಾಂಶ ನೀಡುವ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಇಲಾಖೆ ಕೂಡ ಗಂಭೀರ ಪ್ರಯತ್ನ ಹಾಕಿದೆ ಎಂದರು.
ಫಲಿತಾಂಶ ವೃದ್ಧಿಗೆ ಕ್ರಮ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ವೃದ್ದಿಯ ಸಂಬಂಧ ಇಲಾಖೆ ಮತ್ತು ಜಿಲ್ಲಾಡಳಿತ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.ಈ ಬಾರಿ ಕೋಚಿಮುಲ್ ಮತ್ತು ಎಸಿಸಿ ಸಿಮೆಂಟ್ ಕಂಪನಿಯವರು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೇಕಾದ ಅಧ್ಯಯನ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಿದ್ದಾರೆ.ಇದನ್ನು ಎಲ್ಲಾ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಗಿದೆ.ಮಧ್ಯಮಾವಧಿ ಪರೀಕ್ಷಾ ಫಲಿತಾಂಶ ಎಲ್ಲೆಲ್ಲಿ ಕಡಿಮೆ ಇದೆಯೋ ಅಂತಹ ಶಾಲೆಗಳನ್ನು ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ದತ್ತು ನೀಡಿದೆ. ಇವರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಫಲಿತಾಂಶ ವೃದ್ದಿಗೆ ಬೇಕಾದ ತಯಾರಿ ನಡೆಸಿದ್ದಾರೆ.ಮಕ್ಕಳೊಂದಿಗೆ ಸಂವಾಧ ನಡೆಸಿ ಅಲ್ಲಿ ಏನಾದರೂ ಕೊರತೆ ಇದ್ದಲ್ಲಿ ಕೂಡಲೇ ಅದರ ನಿವಾರಣೆಗೆ ಕೂಡ ಕ್ರಮವಹಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮತ್ತು ಜಿ,ಪಂ,ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ ಗುಣಮಟ್ಟದ ಶಿಕ್ಷಣ,ಮೌಲ್ಯಮಾಪನ, ಫಲಿತಾಂಶ ಸುಧಾರಣೆ ಸಂಬಂಧ ಸೂಚನೆ ನೀಡಿದ್ದಾರೆ.ಮೇಲಾಗಿ ಪರೀಕ್ಷೆಗೆ ಕೆಲವೇ ದಿನಗಳು ಉಳಿದಿದ್ದು ಈ ಅವಧಿಯಲ್ಲಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬಿ ಅವರನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕು ಎಂಬುದನ್ನೂ ತಿಳಿಸಿದ್ದಾರೆ.ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಕಾಳಜಿ ವಹಿಸಿ ಇಲಾಖೆಗೆ ಬೇಕಾದ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.