ಬಿಜೆಪಿಯಿಂದ ಹಸಿ ಸುಳ್ಳಿನ ವದಂತಿ: ಲಕ್ಷ್ಮಣ್ ಟೀಕೆ
ಸಂಜೆವಾಣಿ ನ್ಯೂಸ್
ಮೈಸೂರು: ಫೆ.26:- ಗ್ಯಾರಂಟಿ ಯೋಜನೆಗಳಿಗೆ ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಬಳಕೆ ಮಾಡಿರುವುದು ಬಿಜೆಪಿಯವರು ಸೃಷ್ಟಿಸಿರುವ ಹಸಿ ಸುಳ್ಳು. ವಾಸ್ತವತೆ ಮರೆ ಮಾಚಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿರುಗೇಟು ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಎಸ್‍ಇಪಿ, ಟಿಎಸ್‍ಪಿ ಅಂದರೆ ಏನು ಅಂತಾನೇ ಗೊತ್ತಿಲ್ಲ. ಚುನಾವಣೆ ಬಂದಿದ್ದರಿಂದ ಪರಿಶಿಷ್ಟರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ಎಸ್ಸಿ-ಎಸ್ಟಿ ಮಕ್ಕಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದರು. ದೇಶದಲ್ಲಿ ಮೊಟ್ಟ ಮೊದಲು ಎಸ್‍ಇಪಿ, ಟಿಎಸ್‍ಪಿ ಯೋಜನೆ ಜಾರಿಗೆ ತಂದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. 2017ರಲ್ಲಿ ಸುಮಾರು 17 ಸಾವಿರ ಕೋಟಿ ಮೀಸಲಿಟ್ಟದ್ದರು. 2024ರಲ್ಲಿ ಎಸ್‍ಇಪಿ, ಟಿಎಸ್‍ಪಿಗೆ 39 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಸೀಟು ಹಂಚಿಕೆಯನ್ನು ಸ್ವ್ಯಾಪಿಂಗ್ ಸಿಸ್ಟಂ ಎಂದು ಟೀಕಿಸಿದ ಲಕ್ಷ್ಮಣ್, ಮಂಡ್ಯ, ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗಳು, ತುಮಕೂರು, ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸುತ್ತಾರೆ.
ಹೀಗೆ ಮಾಡಿ ಜೆಡಿಎಸ್ ಪಕ್ಷವನ್ನು ಮುಗಿಸಲು ಬಿಜೆಪಿ ಹೊರಟಿದೆ. ಈಗಾಗಲೇ ಮೈತ್ರಿಯಿಂದ ಜೆಡಿಎಸ್ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಕುಡಿಯುವ ನೀರಿಗೆ ಹಾಹಾಕಾರ: ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಮಳೆಗಾಲ ಬರುವುದಕ್ಕೆ ಇನ್ನೂ ಎರಡು ಮೂರು ತಿಂಗಳಿದೆ. ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಹಾಲಿ ಲಭ್ಯ ಇರುವುದು 14 ಟಿಎಂಸಿ ನೀರು ಮಾತ್ರ. ಹೀಗಾಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಂಭವ ಇದೆ. ಸಿಡಬ್ಲ್ಯೂಆರ್‍ಸಿ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಲು ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಅದನ್ನು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿಯವರು ಮಾರಬಾರದು. ಜನರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಕ್ರಮ ವಹಿಸುತ್ತದೆ ಎಂದರು.
ಗೋ ಬ್ಯಾಕ್ ಶೋಭಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಶೋಭ ಕರಂದ್ಲಾಜೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ 6 ಬಾರಿಯೂ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ದಿಶಾ ಮೀಟಿಂಗ್‍ಗಳಲ್ಲಿ ಭಾಗವಹಿಸಿಲ್ಲ. ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ನುಡಿದರು.
ಗೋಷ್ಠಿಯಲ್ಲಿ ನಗರಾದ್ಯಕ್ಷ ಆರ್.ಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಎಂ.ಮಹೇಶ್, ಮುಖಂಡ ಗಿರೀಶ್ ಹಾಜರಿದ್ದರು.