ಶ್ರೀ ಜಯಶಾಂತಲಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ
ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.26: ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿಲಿರ್ಂಗಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ನಗರದ ಉಕ್ಕಲಿ ರಸ್ತೆಯಲ್ಲಿರುವ ಶ್ರೀ ಜಯಶಾಂತಲಿಂಗೇಶ್ವರ ಬ್ರಹನ್ಮಠ, ವಿಶ್ವಶಾಂತಿ ಪೀಠದಲ್ಲಿ ಫೆ.22 ರಿಂದ ಫೆ.24ರ ವರೆಗೆ ವಿವಿಧ ಪೂಜಾ ವಿಧಾನಗಳು, ಪ್ರವಚನ, ಉಪನ್ಯಾಸ ಗೋಷ್ಠಿಗಳು ಸೇರಿದಂತೆ ಅನೇಕ ಸಾಂಸ್ಕøತಿಕ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.
ಫೆ.24 ರಂದು ಬೆಳಿಗ್ಗೆ 7 ಗಂಟೆಗೆ ಪರಮಪೂಜ್ಯ ಶ್ರೀ ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳಿಂದ ಇಷ್ಟಲಿಂಗ ಮಹಾಪೂಜೆ, 7.30ಕ್ಕೆ ವೇದ ಮೂರ್ತಿ ಪಂಡಿತ ಶಿವಯೋಗಿ ಶರ್ಮಾ ಹಾಗೂ ವೃಂದದಿಂದ ಮಹಾರುದ್ರಯಜ್ಞ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ದೀಕ್ಷೆ, 10 ಕ್ಕೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾರುದ್ರ ಯಜ್ಞದ ಪೂರ್ಣಾಹುತಿ, 2 ಗಂಟೆಗೆ ಶಿವಾನುಭವಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಂಜೆ 7.30ಕ್ಕೆ ಭವ್ಯ ರಥೋತ್ಸವ ನೆರವೇರಿತು.
ಸಾವಿರಾರು ಭಕ್ತರು ಶ್ರೀ ಜಯಶಾಂತಲಿಂಗೇಶ್ವರ ರಥವನ್ನು ಎಳೆದು ಪುನೀತರಾದರು.
ಈ ಸಂದರ್ಭದಲ್ಲಿ ವಿಭೂತಿಪೂರಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಜಿ, ಕೊಟ್ಟೂರು ಹಾಗೂ ಡೋಣೂರ ಮಠದ ಪರಮಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ವಿರಕ್ತಮಠದ ಬಸವಲಿಂಗ ಸ್ವಾಮಿಜಿ, ಹಿರೂರು ಅನ್ನದಾನೇಶ್ವರ ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.