ಭಕ್ತ ಕನಕದಾಸರು ಭಕ್ತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಸ್ವಾತಂತ್ರ್ಯ ಹೋರಾಟದ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದಾರೆ: ಸಚಿವ ಎಂ.ಬಿ. ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.26: ಕನಕದಾಸರು ಭಕ್ತಿಯ ಮೂಲಕ ಮತ್ತು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸ ಮತ್ತು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿಯ ಉದ್ಘಾಟನೆ ನೆರವೇರಿಸಿದ ನಂತರ ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣ, ಕನಕದಾಸ, ರಾಯಣ್ಣ, ಅಂಬೇಡ್ಕರ ಮಹಾಪುರುಷರು ಮತ್ತು ರಾಷ್ಟ್ರ ನಾಯಕರು. ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಹಾಲುಮತ ಅಪಾರ ದೈವಭಕ್ತಿ ಹೊಂದಿರುವ ಸಮಾಜವಾಗಿದೆ. ಭಕ್ತ ಕನಕದಾಸರು ಭಕ್ತಿಯಿಂದ ಕೃಷ್ಣನನ್ನು ಒಲಿಸಿಕೊಂಡಿದ್ದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ಉಳಿವಿಗಾಗಿ ರಾಣಿ ಚೆನ್ನಮ್ಮರ ಜೊತೆ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಮತ್ತು ಆದರ್ಶಮಯ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.
ಕಾತ್ರಾಳ ಗ್ರಾಮಸ್ಥರು ದುಡಿಮೆಗೆ ಸಶಕ್ತರು, ಶ್ರಮಜೀವಿಗಳು. ನೀರಾವರಿಯಿಂದಾಗಿ ಈ ಗ್ರಾಮದ ಜನ ಕೃಷಿ ಚಟುವಟಿಕೆಗಳಲ್ಲಿ ವ್ಯಸ್ಥರಾಗಿದ್ದಾರೆ. 2013 ರಿಂದ 18ರ ಅವಧಿಯಲ್ಲಿ ಸಿಎಂ ಎಸ್. ಸಿದ್ಧರಾಮಯ್ಯ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ಈ ಭಾಗದಲ್ಲಿ ರೈತರು ಆರ್ಥಿಕವಾಗಿ ಸಶಕ್ತರಾಗುತ್ತಿರುವುದು ಸಂತಸ ತಂದಿದೆ. ಈಗ ಕಾತ್ರಾಳ ಗ್ರಾಮದ ಅಗಸಿಯಲ್ಲಿ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣರ ಪ್ರತಿಮೆ ಸ್ಥಾಪನೆಯಿಂದಾಗಿ ಗ್ರಾಮಕ್ಕೆ ಲಕ್ಷಣ ಬಂದಿದೆ. ಈ ಭಾಗದಲ್ಲಿ ಬಾಕಿ ಇರುವ 15ನೇ ವಿತರಣೆ ಕಾಲುವೆ ಮತ್ತು 5ಎ ಮತ್ತು 5ಬಿ ನೀರಾವರಿ ಕಾಮಗಾರಿಗಳಿಗೆ ಕೆಬಿಜೆಎ???ಲ್ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಒಟ್ಟು ರೂ. 319 ಕೋ. ವೆಚ್ಚದ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಲ್ಲದೇ, ಕಾತ್ರಾಳ ಕೆರೆ ತುಂಬಿಸಲೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಈಗ ಕೈಗಾರಿಕೆ ಸಚಿವನಾಗಿ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕಾರ್ಯೋನ್ಮುಖನಾಗಿದ್ದು, ಈಗಾಗಲೇ ಎರಡು ಕಂಪನಿಗಳು ಉದ್ಯಮ ಸ್ಥಾಪನೆಗೆ ಮುಂದಾಗಿವೆ. ಜೆ.ಎಸ್.ಡಬ್ಲ್ಯೂ ಜೊತೆಗೂ ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ಸರೂರ ಅಗತೀರ್ಥ ಹಾಲುಮತ ಗುರುಪೀಠದ ಶ್ರೀ ರೇವಣಸಿದ್ಧೇಶ್ವರ ಶಾಂತಮಯ ಮಹಾಸ್ವಾಮಿಗಳು ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಬಿಸಿಲ ನಾಡಿನಲ್ಲಿ ಭೂಮಿತಾಯಿಗೆ ಅಗತ್ಯವಾಗಿರುವ ನೀರನ್ನು ನೀಡುವ ಮೂಲಕ ಪ್ರಕೃತಿಯಲ್ಲಿ ಹಸಿರು ಸಮೃದ್ಧಿಯಾಗಿರುವಂತೆ ಮಾಡಿ ಜನರು ನೆಮ್ಮದಿಯಿಂದ ಉಸಿರಾಡುವಂತೆ ಮಾಡಿದ್ದಾರೆ. ಭೂಮಿತಾಯಿ ನೀರಾವರಿ ಯೋಜನೆಗಳ ಮೂಲಕ ಈ ಭಾಗದ ಸವಾರ್ಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇದರಿಂದಾಗಿ ಈಗ ಬರಡು ನೆಲದಲ್ಲಿ ಲಕ್ಷಾಂತರ ಟನ್ ಕಬ್ಬು ಬೆಳೆಯಲಾಗುತ್ತದೆ. ಈ ಮೂಲಕ ಸಚಿವರು ನಿಜವಾದ ಜನಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಮನುಕುಲoದ ಒಳಿತಿಗಾಗಿ ಹೋರಾಡಿದ್ದಾರೆ. ನಾಡು ಮತ್ತು ದೇಶಕ್ಕಾಗಿ ಜೀವತ್ಯಾಗ ಮಾಡಿ ಕ್ರಾಂತಿ ಮಾಡಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆಗಾಗಿ ಶ್ರಮಿಸಿದ್ದಾರೆ. ಅವರ ನಂತರ ಕನಕದಾಸರು ಸಮಾನತೆಯ ಹೋರಾಟ ಮುಂದುವರೆಸಿದ್ದರು. ಕನಕದಾಸರ ಕಾಲದಲ್ಲಿ ಕನಕರನ್ನು ಕೆಣಕಬೇಡಿ. ಕೆಣಕಿ ತಿಣುಕಬೇಡಿ ಎಂಬುದು ಅಂದಿನ ಕಾಲದಲ್ಲಿ ಜನಜನಿತವಾಗಿತ್ತು. ಇಂದಿನ ಯುವಕರು ಮೂಢನಂಬಿಕೆಗಳಿಂದ ಹೊರ ಬರಬೇಕು. ದುಶ್ಚಟಗಳಿಂದ ದೂರವಿರಬೇಕು. ಆಚರಣೆ ಹೆಸರಿನಲ್ಲಿ ದುಂದುವೆಚ್ಚ ಮಾಡಿ ಆರ್ಥಿಕವಾಗಿ ತೊಂದರೆಗೆ ಸಿಲುಕುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಶಿಕ್ಷಿತರನ್ನಾಗಿ ಮಾಡಿ ಎಂದು ಸಮಾಜದ ಜನತೆಗೆ ಕಿವಿಮಾತು ಹೇಳಿದರು.
ಮಹಾರಾಷ್ಟ್ರದ ಸುಕ್ಷೇತ್ರ ಹುಲಜಂತಿ ಪಟ್ಟದ ಪೂಜ್ಯರಾದ ಶ್ರೀ ಮಾಳಿಂಗರಾಯ ಮಹಾರಾಯರು ಮಾತನಾಡಿ, ಪರೋಪಕಾರಕ್ಕಾಗಿ ಬದುಕಿದವರು ದೇವರಾಗುತ್ತಾರೆ. ಕನಕದಾಸರು, ರಾಯಣ್ಣರು ತಮ್ಮ ಕಾಯಕಗಳ ಮೂಲಕ ಅಜರಾಮರರಾಗಿದ್ದಾರೆ. ಮಾನವ ಕುಲದ ಹಿತಕ್ಕಾಗಿ ಬದುಕಿ ಸೂರ್ಯ ಚಂದ್ರರಿರುವ ವರೆಗೆ ಅವರು ಅಜರಾಮರರಾಗಿರುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ರಾಯಣ್ಣ ನಮಗೆ ಮಾದರಿಯಾಗಬೇಕು. ಎಂ. ಬಿ. ಪಾಟೀಲರು ಮಡ್ಡಿಭೂಮಿಗೆ ನೀರುಕೊಟ್ಟು ರೈತರು ಸಮಾಜಕ್ಕೆ ಅನುದಾನ ನೀಡುವಂತೆ ಮಾಡಿದ್ದಾರೆ. ಅವರ ಕಾರ್ಯಗಳೂ ಜನಮಾನಸದಲ್ಲಿ ಶಾಶ್ವತವಾಗಿರಲಿವೆ ಎಂದು ಹೇಳಿದರು.
ಖ್ಯಾತ ವಾಗ್ಮಿ ಮತ್ತು ಯುವ ಮುಖಂಡ ಮೋಹನ ಮೇಟಿ ಮಾತನಾಡಿ, ಕಾಯಕ ವೃತ್ತಿಗಳ ಆಧಾರದ ಮೇಲೆ ಜಾತಿಗಳಾಗಿವೆ. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆಗಾಗಿ ಹೋರಾಡಿದರೆ, ಅವರ ನಂತರ ಭಕ್ತ ಕನಕದಾಸರು ಸಮಾನತೆ ಮತ್ತು ಸಾಮಾಜಿಕ ಮೌಢ್ಯಗಳ ವಿರುದ್ಧ ಹೋರಾಡಿದರು. ಇವರ ಬಳಿಕ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ್ದಾರೆ. ಇಂಥ ಮಹಾಪುರುಷರು ಯುವಕರಿಗೆ ಪ್ರೇರಣೆಯಾಗಬೇಕು. ಹಾಲುಮತ ಧರ್ಮ ಎಲ್ಲದಕ್ಕೂ ಮೂಲ ಧರ್ವವಾಗಿದೆ. ಸಚಿವ ಎಂ. ಬಿ. ಪಾಟೀಲರು ಅಕ್ಷರ, ಅನ್ನ, ನೀರು ಕೊಟ್ಟ ಭಗೀರಥರಾಗಿದ್ದಾರೆ. ಜನರ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಕ್ಷೇತ್ರ ಗೊಳಸಾರದ ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಹಂದಿಗುಂದ ಶ್ರೀ ಹಾಲಸಿದ್ಧನಾಥನ ಮಠದ ಶ್ರೀ ಶ್ರೀಮಂತ ಶಿವಯೋಗಿ ಅಜ್ಜನವರು, ಸುಕ್ಷೇತ್ರ ಬಳಗಾನೂರಿನ ಶ್ರೀ ಸೋಮರಾಯ ಮುತ್ಯಾ, ಕಾತ್ರಾಳ ಗದ್ದುಗೆ ಪೂಜಾರಿ ಶ್ರೀ ಮಲಕಾರಿಸಿದ್ಧ ಒಡೆಯರ, ಮಲ್ಲಯ್ಯ ಮಠ, ಕಾತ್ರಾಳ ಶ್ರೀ ಕನಕದಾಸ ಸಂಘದ ಅಧ್ಯಕ್ಷ ವಿಠ್ಠಲ ಪಡಸಲಗಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರಾಜು ಕಂಬಾಗಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಪರಸಣ್ಣವರ, ಮಲ್ಲು ಬಿದರಿ, ವಿಠ್ಠಲ ಪಡಸಲಗಿ, ಕಲ್ಲಪ್ಪಗೌಡ ನ್ಯಾಮಗೌಡ, ವಿಠ್ಠಲ ಯಂಕಪ್ಪ ಪಡಸಲಗಿ, ಎಂ. ಡಿ. ಪಡಸಲಗಿ, ಬಾಳೇಶ ಪಡಸಲಗಿ, ಮಾಸಿದ್ದ ಪಡಸಲಗಿ, ತುಕಾರಾಮ ಪಡಸಲಗಿ, ಅಮ್ಮೋಗಿ ಗಲಗಲಿ, ಲಕ್ಷ್ಮಣ ಜಿರಲಿ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಕಾರ್ಯಕ್ರಮದ ಅಂಗವಾಗಿ ಶ್ರೀ ಭಕ್ತ ಕನಕದಾಸ ಮತ್ತು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಭಾವಚಿತ್ರಗಳ ಮೆರವಣಿಗೆ ಮತ್ತು ಕುಂಭಮೇಳ ನಡೆಯಿತು.