ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಣೆ
ಕಲಬುರಗಿ:ಸೆ.15: ಕಲಬುರಗಿ ಕೇಂದ್ರ ಕಾರಾಗೃಹ, ಅದಾನಿ ಗ್ರೂಪ್‍ನ ಸಕ್ಷಮ ಕೌಶಲ ತರಬೇತಿ ಕೇಂದ್ರ ಮತ್ತು ಶೃಂಗೇರಿ ಶಾರದಾ ಪೀಠದ ಸೋಕೇರ್ ಇಂಡ್ ಸಂಸ್ಥೆ ಇವರ ಸಹಯೋಗದೊಂದಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆದ ಕೇಂದ್ರ ಕಾರಾಗೃಹದ ಬಂದಿಗಳಿಗೆ ಕಲಬುರಗಿ ಕೇಂದ್ರದಲ್ಲಿ ಕಾರಾಗೃಹದಲ್ಲಿ ಶನಿವಾರ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ ಅವರು, ‘ಕೈದಿಗಳ ಸುಧಾರಣೆ ನಮ್ಮ ಕರ್ತವ್ಯ. ಪುನರ್ವಸತಿ ಸಂಸ್ಥೆಗಳಿಂದ ತರಬೇತಿ ಪಡೆದ ಕೈದಿಗಳು ಬಿಡುಗಡೆಯಾದ ನಂತರ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರಾಗೃಹ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ, ಶೃಂಗೇರಿ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಹರಿಹರ, ಕಲಬುರಗಿ ಸೋಕೇರ್ ಇಂಡ್ ಅಧ್ಯಕ್ಷ ಪ್ರಕಾಶ್ ಕುಲಕರ್ಣಿ ಹಾಗೂ ಅದಾನಿ ಗ್ರೂಪ್ನ ಕೌಶಲ ತರಬೇತಿ ಕೇಂದ್ರದ ಆಪರೇಷನಲ್ ಮ್ಯಾನೇಜರ್ ಅಶೋಕ್ ಕುಮಾರ್ ಎಚ್., ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೈಲರ್‍ಗಳಾದ ಪರಮಾನಂದ ಹರವಾಳ, ಶೈನಾಜ್ ನಿಗೆವಾನ್, ಶೃಗೇರಿ ಪೀಠದ ವಿನೀತ್ ಉಪಸ್ಥಿತರಿದ್ದರು. ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೊದಲ ಬ್ಯಾಚ್‍ನಲ್ಲಿ ತರಬೇತಿ ಪಡೆದ 30 ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 2ನೇ ಬ್ಯಾಚ್‍ನವರಿಗೆ ತರಬೇತಿ ಕಿಟ್ ವಿತರಿಸಲಾಯಿತು.