ಸ್ಮಾರ್ಟ್‌ ಸಿಟಿ ಮಾದರಿಯಲ್ಲಿ ಕಲಬುರಗಿ ಅಭಿವೃದ್ಧಿಗೆ 1 ಸಾ. ಕೋಟಿ ಅನುದಾನ ಸಂಪುಟ ಸಭೆಯಲ್ಲಿ ಘೋಷಿಸಿ: ಸಿಎಂ ಸಿದ್ದರಾಮಯ್ಯನವರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಒತ್ತಾಯ
ಕಲಬುರಗಿ:ಸೆ.15: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದ ಏಳು ನಗರಗಳು- ಬೆಂಗಳೂರು, ತುಮಕೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೀಗ ಇದೇ ಮಾದರಿಯಲ್ಲಿ ಕಲಬುರಗಿ ನಗರವನ್ನು ಅಭಿವೃದ್ಧಿ ಪಡಿಸಲು ಸೆ. 17 ರ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಕಲಬುರಗಿ ಕೂಡಾ ಪಾರಂಪರಿಕ , ಐತಿಹಾಸಿಕ ನಗರವಾಗಿದೆ. ಕಾರಣಾಂತರದಿಂದ ಸ್ಮಾರ್ಟ್‌ ಸಿಟಿ ಪಟ್ಟ ಕಲಬುರಗಿಗೆ ದೊರೊಕಲಿಲ್ಲ. ಆದಾಗ್ಯೂ ಕರ್ನಾಟಕ ಸರ್ಕಾರ ಈ ಐತಿಹಾಸಿಕ ಸಂಪುಟ ಸಭೆಯಲ್ಲಿ ಕಲಬುರಗಿಗೆ ಸ್ಮಾರ್ಟ್‌ ಸಿಟಿ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಲು ಅದಕ್ಕಾಗಿ 1 ಸಾವಿರ ಕೋಟಿ ರು ಅನುದಾನ ನೀಡಲಿ ಎಂದು ಶಾಸಕರು ಆಗ್ರಹಿಸಿದ್ದಾರೆ.
ಸಂಪೂರ್ಣ ಮೂಲಸೌಕರ್ಯವನ್ನು ನವೀಕರಿಸುವ, ನಗರವಾಸಿಗಳ ಸ್ನೇಹಿಯನ್ನಾಗಿಸುವ ಕೆಲಸ ಕಲಬುರಗಿಯಲ್ಲ ಆಗಬೇಕು. ರಸ್ತೆಗಳು, ಕಾಲುದಾರಿಗಳು, ಸಾರ್ವಜನಿಕ ಸಾರಿಗೆ, ಉದ್ಯಾನವನಗಳು, ಬೀದಿ ದೀಪಗಳು ಮತ್ತು ಇಡೀ ನಗರ ಭೂದೃಶ್ಯವನ್ನು ಸುಧಾರಿಸಲು ಸ್ಮಾರ್ಟ್‌ ಸಿಟಿ ಯೋಜನೆ ಮಾದಜರಿಯಲ್ಲೇ ಅಭಿವೃದ್ಧಿಯಾಗಲಿ ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಕಲಬುರಗಿ ಮಹಾನಗರದ ಅತ್ಯಂತ ಅವಶ್ಯವಾಗಿರುವ ಹಾಗೂ ಅಗತ್ಯವಾಗಿರುವ ಈ ಸ್ಮಾರ್ಟ್‌ ಸಿಟಿ ಮಾದರಿಯ ಅಭಿವೃದ್ಧಿ ಅನುದಾನದ ಬೇಡಿಕೆಯ ಬಗ್ಗೆ ತಾವು ಅದಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚವರಾದ ಡಾ. ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಚರ್ಚಿಸಿದ್ದಾಗಿ ಹೇಳಿರುವ ಅಲ್ಲಂಪ್ರಭು ಪಾಟೀಲ್‌ ತಾವೂ ಖುದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಹೇಳಿದ್ದಾರೆ.