ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿಶ್ವೇಶ್ವರಯ್ಯನವರ ಚಿಂತನೆಗಳು ಸಾರ್ವಕಾಲಿಕ
ಕಲಬುರಗಿ:ಸೆ.15: ಪ್ರತಿಯೊಂದು ರಾಷ್ಟ್ರ ಪ್ರಗತಿ ಹೊಂದಬೇಕಾದರೆ ಯೋಜನೆಗಳು ತುಂಬಾ ಅಗತ್ಯವಿದೆಯೆಂದು ಪ್ರತಿಪಾದಿಸಿ, ನಮ್ಮ ರಾಷ್ಟ್ರವನ್ನು ಯೋಜನಾಬದ್ಧವಾಗಿ ರೂಪುಗೊಳಿಸಿದ ವಿಶ್ವೇಶ್ವರಯ್ಯನವರ ಕೊಡುಗೆ ಬಹಳ ಅಮೂಲ್ಯವಾಗಿದೆ. ಅವರ ಚಿಂತನೆಗಳನ್ನು ಪ್ರತಿಯೊಂದು ರಾಷ್ಟ್ರ ಅಳವಡಿಸಿಕೊಂಡರೆ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಪಿಡಿಎ ಇಂಜಿನಿಯರಿಂಗ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಹೇಳಿದರು.
ನಗರದ ಜೆ.ಆರ್ ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಸರ್.ಎಂ.ವಿಶ್ವೇಶ್ವರಯ್ಯನವರ 163ನೇ ಜನ್ಮದಿನ-ಇಂಜಿನಿಯರಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯನವರದು ದೂರದೃಷ್ಟಿಯ ಮೇರು ವ್ಯಕ್ತಿತ್ವ. ಶ್ರೇಷ್ಟ ಇಂಜಿನಿಯರಾಗಿ, ಆರ್ಥಿಕ ಚಿಂತಕರಾಗಿ, ತತ್ವಜ್ಞಾನಿಯಾಗಿ ರಾಷ್ಟ್ರದ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದರಿಂದಲೇ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.ಅವರು ಹಾಕಿಕೊಟ್ಟ ‘ಯೋಜನಾ ಮಾರ್ಗ’ದಲ್ಲಿ ಸಾಗಿದ್ದರೆ ಬಡತನ, ನಿರುದ್ಯೋಗ, ಅನಕ್ಷರತೆ, ಹಿಂದುಳಿದಿರುವಿಕೆ ಅಂತಹ ಜ್ವಲಂತ ಸಮಸ್ಯೆಗಳು ನಿರ್ಮೂಲನೆಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಪ್ರಮುಖರಾದ ಭಾಗ್ಯಶ್ರೀ ಹೂಗಾರ, ಭಾಗ್ಯಶ್ರೀ ಕಾರಬಾರಿ ಸೇರಿದಂತೆ ಇನ್ನಿತರರಿದ್ದರು.