ಸಂವಿಧಾನ, ಪ್ರಜಾಪ್ರಭುತ್ವ ರಾಷ್ಟ್ರದ ಜೀವಾಳ
ಕಲಬುರಗಿ:ಸೆ.15: ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಳಲ್ಪಡುವ ಅದ್ಭುತ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದೆ. ಪ್ರಜೆಗಳೇ ಪ್ರಭುಗಳಾಗಿದ್ದು, ‘ಮತದಾನ’ವೆಂಬ ದೊಡ್ಡ ಅಸ್ತ್ರ ಹೊಂದಿದ್ದಾರೆ. ದೇಶ, ಧರ್ಮ, ಜಾತಿ, ಭಾಷೆ, ಪ್ರಾಂತ್ಯಗಳ ಆಧಾರದ ಮೇಲೆ ಮೇಲು-ಕೀಳು ಮಾಡದೆ, ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ದೇಶದ ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕು. ಯಾವುದೇ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸಫಲತೆಯಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಶ್ರೀ ವಿವೇಕಾನಂದ ಕೋಚಿಂಗ್ ಕೇಂದ್ರ’ದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಭಾನುವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯಲ್ಲಿ ಮಾತನಾಡುತ್ತಿದ್ದ ಅವರು, ಸಂವಿಧಾನವು ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವೆಂದು ಸಾರಿದೆ. ರಾಷ್ಟ್ರದ ಅಭಿವೃದ್ದಿಯಲ್ಲಿ ಸಂವಿದಾನ ಮತ್ತು ಪ್ರಜಾ ಪ್ರಭುತ್ವದ ಮೌಲ್ಯಗಳು ತುಂಬಾ ಅವಶ್ಯಕವಾಗಿವೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಮರೆಯುವಂತಿಲ್ಲ ಎಂದರು.
ವಸಂತ ಬಿ.ಎಡ್ ಕಾಲೇಜಿನ ಉಪನ್ಯಾಸಕ ಬಸವರಾಜ ಮಳ್ಳಿ ಮಾತನಾಡಿ, ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಆತ್ಮವಿದ್ದಂತೆ. ಅದರಲ್ಲಿ ದೇಶದ ಸಮಗ್ರವಾದ ಚಿತ್ರಣವನ್ನು ನೀಡಲಾಗಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ. ಬೃಹತ ಸಂವಿಧಾನ, ಆಡಳಿತ ವ್ಯವಸ್ಥೆ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಸಮಾಜ ಸೇವಕ ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಪ್ರಮುಖರಾದ ಕುಮಾರದತ್ತ ಸೊಲ್ಲಾಪುರ, ಶರಣು ಇಟಗಿ, ಸರ್ವೇಶ್ ಕುಲಕರ್ಣಿ ಸೇರಿದಂತೆ ಇನ್ನಿತರರಿದ್ದರು.