ರೈತ ಆತ್ಮಹತ್ಯೆ: ಪರಿಹಾರ ನೀಡಲು ಅರವಿಂದ ಕುಲಕರ್ಣಿ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.26 :ರೈತರ ಆತ್ಮಹತ್ಯೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದ್ದಾರೆ.
ಉಭಯ ಸರ್ಕಾರಗಳು ಅನುಸರಿಸುತ್ತಿರುವ ರೈತ ವಿರೋಧಿ ನೀತಿಯೇ ಕಾರಣ. ನಿರಂತರ ಬರಗಾಲದಿಂದ ತತ್ತರಿಸಿದ ರೈತರು ಅನಿವಾರ್ಯವಾಗಿ ಸಕಲ ಜೀವರಾಶಿಗಳನ್ನು ಬದುಕಿಸಲು ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಬಿತ್ತನೆ ಮಾಡುತ್ತಾರೆ. ಸಕಾಲಕ್ಕೆ ಮಳೆ ಆಗದೇ ಬೆಳೆ ಬಾರದೆ ಇರುವುದರಿಂದ ರೈತರು ಹತಾಶೆಗೊಂಡು ಸಾಲ ಹೇಗೆ ತಿರಿಬೇಕೆಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಿಂದ ಕುಟುಂಬದ ಯಜಮಾನನ್ನು ಕಳೆದುಕೊಂಡ ಹೆಂಡತಿ ಮಕ್ಕಳು ಬೀದಿ ಪಾಲಾಗುತ್ತಾರೆ. ಇಂತಹ ಗಂಭೀರತೆಯನ್ನು ಅರಿಯದ ಸರ್ಕಾರ ಈ ದೇಶದ ಉದ್ಯಮೆದಾರರ ಸಾಲ ಮನ್ನಾ ಮಾಡುತ್ತಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಆತ್ಮಹತ್ಯೆ ತಡೆಗಟ್ಟಲು ಸಂಪೂರ್ಣ ಸಾಲ ವiನ್ನಾ ಮಾಡಬೇಕು. ಆತ್ಯಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ಘೋಷಿಸಬೇಕೆಂದು ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.