ಮಾ.೧ ರಂದು ಛಾಯ ಚಲನಚಿತ್ರ ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಫೆ.26: ನ್ಯೂ ಗ್ಲೋಬಲ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಿಸಿರುವ ಹಾರರ್ ಹಿನ್ನೆಲೆಯ ಚಿತ್ರ ‘ಛಾಯ’ ಬರುವ ಮಾರ್ಚ್ 1 ರಂದು ರಾಜ್ಯಾದ್ಯಂತ ೫೦೦ ಚಿತ್ರಮಂದಿರಗಳಲ್ಲಿ  ತೆರೆಕಾಣಲಿದೆ ಎಂದು ನಿರ್ದೇಶಕ ಜಗ್ಗು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಚಿತ್ರದಲ್ಲಿ ಮಾರಕಾಸ್ತ್ರ ಖ್ಯಾತಿಯ ಆನಂದ್ ಆರ್ಯ(ಜೂನಿಯರ್ ಪುನೀತ್ ರಾಜ್ ಕುಮಾರ್). ತೇಜುರಾಜ್ ಹಾಗೂ ಅನನ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಲ್ವರು ಸ್ನೇಹಿತರ ಸುತ್ತ ನಡೆಯುವ ಘಟನೆಗಳನ್ನೊಳಗೊಂಡ ಕಥೆಯನ್ನು ಹಾರರ್ ಹಿನ್ನೆಲೆ ಇಟ್ಟುಕೊಂಡು  ಚಿತ್ರ ನಿರ್ಮಿಸಲಾಗಿದೆ ಎಂದರು.ಈ ಚಿತ್ರದ ಹಾಡುಗಳಿಗೆ ಮಂಜು ಕವಿ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಲ್ಕು ಜನ ಯುವಕರು ಒಂದು ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿ ಅನೇಕ ಚಿತ್ರವಿಚಿತ್ರ ಘಟನೆಗಳು ನಡೆಯುತ್ತವೆ. ಆ ಎಲ್ಲಾ ಅನಾಹುತಗಳಿಗೆ ಕಾರಣವೇನು ಎನ್ನುವುದೇ ಛಾಯ ಚಿತ್ರದ ಪ್ರಮುಖ ಕಥಾವಸ್ತು ಎಂದು ತಿಳಿಸಿದರು.ಛಾಯ ಹಾರರ್ ಛಾಯೆ ಇರುವ ಸಿನಿಮಾ, ಆದರೆ ಹಾರರ್ ಚಿತ್ರ ಅಲ್ಲ ಎಂದು ಸ್ಪಷ್ಟನೆ ನೀಡಿದ ನಿರ್ದೇಶಕ ಜಗ್ಗು ಹೊಸದಾಗಿ ಮದುವೆಯಾದ ದಂಪತಿಗಳು ಒಂದು ಮನೆಗೆ ಬಂದಮೇಲೆ ಅಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತವೆ. ಅದಕ್ಕೆ, ಕಾರಣವೇನು ಎನ್ನುವುದೇ ಛಾಯಾ ಚಿತ್ರದ ತಿರುಳು. ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಹೇಳಿದರು.ನಾಯಕ ಆನಂದ್ ಆರ್ಯ ಮಾತನಾಡಿ. ಅತ್ಯಾಚಾರ ಇಂದಿನ ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದ್ದು. ಅತ್ಯಾಚಾರ ಮಾಡಿದವರನ್ನು ಹೇಗೆಲ್ಲಾ ಶಿಕ್ಷಿಸಬಹುದು ಎನ್ನುವ ಕಥೆ ಚಿತ್ರದಲ್ಲಿದೆ. ಇಲ್ಲಿ ನಾನೊಬ್ಬ ಸಾಫ್ಟ್ರ್ ಇಂಜಿನಿಯರ್, ೪ ಜನರಲ್ಲಿ ನಾನೂ ಒಬ್ಬ. ಹಣ ಇರುವವರು ಏನೇನೆಲ್ಲ ಚಟಗಳನ್ನು ಕಲಿಯುತ್ತಾರೆ. ಅವರನ್ನು ಒಳ್ಳೇ ದಾರಿಗೆ ತರಲು ನಾನು ಹೇಗೆ ಪ್ರಯತ್ನಿಸುತ್ತೇನೆ, ಫ್ರೆಂಡ್ಸ್ ಮಧ್ಯೆ ಏನೇನೆಲ್ಲ ನಡೆಯುತ್ತದೆಂದು ಚಿತ್ರದಲ್ಲಿ ಹೇಳಲಾಗಿದೆ ಎಂದರು.ಚಿತ್ರದಲ್ಲಿ ೪ ಹಾಡುಗಳಿದ್ದು, ಮತ್ತಲ್ಲಿ ಎಂಬ ಹಾಡಿನ ಲಿರಿಕಲ್ ವಿಡಿಯೋ ಉತ್ತರ ಕರ್ನಾಟಕದಾದ್ಯಂತತುಂಬಾ ಜನಪ್ರಿಯವಾಗಿದೆ. ವೀನಸ್ ನಾಗರಾಜ ಮೂರ್ತಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅನನ್ಯ ರಾಜಶೇಖರ್, ನಯನಕೃಷ್ಣ, ರಾಜ್ ಪ್ರಭು, ಹೇಮಂತ್, ದರ್ಶನ್, ನಂದನ, ರಾಜ್ ಉದಯ್, ಕಿಲ್ಲರ್ ವೆಂಕಟೇಶ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ  ಹೇಮಂತ್, ನಂದಾ, ರಾಜ್ ಪ್ರಭು ಇತರರು ಇದ್ದರು.