ಕನ್ನಡ ಭಾಷೆ  ಬಗ್ಗೆ  ಅಲಕ್ಷ್ಯ  ಬೇಡ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಫೆ,25- ಕನ್ನಡ ಶಾಲೆಯಲ್ಲಿ ಓದಿದವರು ಸಹ ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿ, ಸ್ಥಾನಮಾನದಲ್ಲಿ ಇದ್ದಾರೆ. ಹಾಗಾಗಿ ಯಾರೂ ಕನ್ನಡ ಭಾಷೆ  ಬಗ್ಗೆ  ಅಲಕ್ಷ್ಯ  ಬೇಡ  ಎಂದು ಹಿರಿಯ ಪತ್ರಕರ್ತ ಶಶಿಧರ ಮೇಟಿ ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕಿನ ಹಂದ್ಯಾಳ್ ಗ್ರಾಮದ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ. ಲಿಂ.  ಸಿರಿಗೇರಿ ಬಸವರಾಜ್ ಸ್ಮಾರಕ ದತ್ತಿ ಮತ್ತು
ಪಟೇಲ್ ಬಸವರಾಜ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಮಾಜ ಸೇವಕ ಜೋಳದರಾಶಿ ತಿಮ್ಮಪ್ಪ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಕೊರಗಬಾರದು. ದೇಶಕ್ಕೆ ಕೊಡುಗೆ ನೀಡುವ ನಿಜವಾದ ಪ್ರತಿಭೆಗಳು ಇಲ್ಲಿಯೇ ಇರುತ್ತಾರೆ. ಅವರ ಭವಿಷ್ಯ ಉಜ್ವಲವಾಗಿರಬೇಕು. ಅದಕ್ಕಾಗಿ ನಾವೆಲ್ಲರೂ ನಮ್ಮ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಟಿಬದ್ಧರಾಗಿರಬೇಕು ಎಂದರು. ಈ ವೇಳೆ  ಎಸ್.ಎಸ್
ಎಲ್‌.ಸಿ  ಮಕ್ಕಳಿಗೆ ಪರೀಕ್ಷಾ ಪ್ಯಾಡ್, ಪೆನ್ ಗಳನ್ನು ವಿತರಿಸಿದರು.
ಶಿಕ್ಷಕಿ ಭಾರತಿ ಪುರುಷೋತ್ತಮ  ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು.  ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿ ಪುರುಷೋತ್ತಮ ‌ಹಂದ್ಯಾಳ್,  ಹಂದಿಹಾಳು ಗ್ರಾಮ ಸುಕ್ಷೇತ್ರ. ಈ ನೆಲದಲ್ಲಿ ಪವಾಡ ಪುರುಷ ಎಮ್ಮಿಗನೂರು ಜಡಸಿದ್ದೇಶ್ವರ ಶಿವಯೋಗಿಗಳು, ಮೆಟ್ರಿ ಮಹಾದೇವ ತಾತನವರು ಹಾಗೂ ಪ್ರಸಿದ್ಧ ತತ್ವಪದಕಾರರಾದ ಶಿಲಿವೇರಿ ಶಿವಪ್ಪ ತಾತನವರು ನಡೆದಾಡಿದ್ದಾರೆ. ಇಂಥವರು ಸವೆಸಿದ ಹಾದಿಯಲ್ಲಿ ನಾವೆಲ್ಲಾ ಸಾಗಬೇಕಿದೆ ಎಂದರು.
 ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ರವಿಚಂದ್ರ, ಮುಖ್ಯಗುರು ಡಾ. ಕೆ.ಶಿವಲಿಂಗಪ್ಪ ಹಂದಿಹಾಳು, ಪ್ರೌಢಶಾಲಾ ವಿಭಾಗದ ಮುಖ್ಯ ಗುರು  ಕವಿತ.ವೈ ಹಾಗೂ ವರದಿಗಾರ ವೆಂಕೋಬಿ ಸಂಗನಕಲ್ಲು, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
 ಶಿಕ್ಷಕಿ ನಾಹಿದಾ ಅಂಜುಮ್ ನಿರೂಪಿಸಿದರು. ಸ್ವಾಗತ ಪ್ರಾಸ್ತಾವಿಕ ನುಡಿಯನ್ನು ಕೆ‌.ಶಿವಲಿಂಗಪ್ಪ ನುಡಿದರೆ, ವಂದನೆಯನ್ನು ಶಿಕ್ಷಕಿ ಜಿ.ಆರ್. ಸುಮಲತಾ ನೆರವೇರಿಸಿದರು.