ಸುಳ್ಳು, ಭ್ರಷ್ಟಾಚಾರ ಕಾಂಗ್ರೆಸ್‍ನ ಗಂಗೋತ್ರಿ
ಹುಬ್ಬಳ್ಳಿ, ಫೆ 25: ಸುಳ್ಳು ಮತ್ತು ಭ್ರಷ್ಟಾಚಾರ ಕಾಂಗ್ರೆಸ್‍ನ ಗಂಗೋತ್ರಿಯಾಗಿದೆ ಎಂದು ಮಾಜಿ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಹಿನ್ನಡೆಯಾಗಿದ್ದರೇ ಅದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಹೊಣೆ. ಈ ಹಿಂದೆ ಮೊಟ್ಟಮೊದಲ ಟ್ರಿಬ್ಯೂನಲ್‍ಗೆ ಹೋಗುವ ಅವಶ್ಯಕತೆ ಇರಲಿಲ್ಲ, ಮನಮೋಹನ್ ಸಿಂಗ್ ಅವರು ಪ್ರಧಾನಿಗಳಿದ್ದಾಗ ಟ್ರಿಬ್ಯೂನಲ್ ಮಾಡಿದ್ದು ಕಾಂಗ್ರೆಸ್ ಪಕ್ಷ, ಅದರಿಂದ 8-10 ವರ್ಷ ವಿಳಂಬವಾಯಿತು. ಅತ್ಯಂತ ದೊಡ್ಡ ತಪ್ಪು ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಟ್ರಿಬ್ಯೂನಲ್‍ನಲ್ಲಿ ಬರೆದು ಕೊಟ್ಟು ಮಹದಾಯಿಯಿಂದ ಮಲಪ್ರಭಾ ಇಂಟರ್ ಲಿಂಕಿಂಗ್ ಜೋಡಣೆಗೆ ಕಾಂಗ್ರೆಸ್‍ನವರು ಗೋಡೆ ಕಟ್ಟಿದ್ದರು, ನೀರಾವರಿ ಯೋಜನೆಗೆ ಗೋಡೆಕಟ್ಟಿದ ಅಪಖ್ಯಾತಿ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಇದೆ. ನಾವು ಕೆನಾಲ್ ಮಾಡಿದರೆ ಇವರು ಗೋಡೆ ಕಟ್ಟಿದರು ಎಂದರು.
ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಸುಳ್ಳು ಹೇಳತ್ತಾರೆ, ಸತ್ಯ ಹೇಳತ್ತಾರೆ ಜನರಿಗೆ ಗೊತ್ತಿದೆ. ಕಾಂಗ್ರೆಸ್‍ನವರು ಸತ್ಯ ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.