ಬೇಸಿಗೆ ಜಲಕಂಟಕ : ಸದನದಲ್ಲಿ ಬಿ.ಜಿ ಪಾಟೀಲ ಪ್ರಸ್ತಾಪ
ಕಲಬುರಗಿ,ಫೆ 25: ಜಿಲ್ಲೆಯಲ್ಲಿ ಅಂತರ್ಜಲ ಸಮಸ್ಯೆಯಿಂದ ಬೇಸಿಗೆಗೆ ಜಲಕಂಟಕ ಬಂದೊದಗಲಿದೆ ಎಂದು ವಿಧಾನ ಪರಿಷತ್ತು ಸದಸ್ಯ ಡಾ.ಬಿ.ಜಿ ಪಾಟೀಲ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ, ಅಳಂದ ಹಾಗು ಇತರ ತಾಲೂಕುಗಳಲ್ಲಿ ನೀರಿಗಾಗಿ ಡಿಸೆಂಬರ್ ತಿಂಗಳಿನಿಂದಲೇ ಹಾಹಾಕಾರ ವಾಗುತ್ತಿರುವುದು ಮುಂದಿನ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆಯ ಭೀಕರತೆಗೆ ಮುನ್ಸೂಚೆನೆ ಎಂದರೆ ತಪ್ಪಲ್ಲ. ಕಳೆದ ವರ್ಷ ಬೇಸಿಗೆಯಲ್ಲಿ 170 ಗ್ರಾಮಗಳಲ್ಲಿ ನೀರಿನ ಕೊರತೆ ಇದ್ದು ಈ ವರ್ಷ 282 ಗ್ರಾಮಗಳಲ್ಲಿ ಈ ಸಮಸ್ಯೆಯು ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಇಡೀ ಸರಕಾರಿ ವ್ಯವಸ್ಥೆಯು ಚುನಾವಣಾ ಕೆಲಸಗಳಲ್ಲಿ ನಿರತರಾಗುವ ಸಂಭವವಿದ್ದು ಆ ದಿನಗಳಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರ ಹಾಗು ಅಧಿಕಾರಿಗಳು ಚುನಾವಣಾ ನೆಪ ಹೇಳುವ ಸಂಧರ್ಭ ಬರುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ಕನಿಷ್ಠ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಪರಿಸ್ಥಿತಿ ಉಂಟಾಗುವುದಿದ್ದು ಈ ಕುರಿತು ಈಗಲೇ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಇಲಾಖೆಯ ಸಚಿವರ ತವರಲ್ಲಿ ನೀರಿನ ಹಾಹಾಕಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸರಕಾರವನ್ನು ಒತ್ತಾಯಿಸಿದರು.