ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಬೇಕು
ಚಿತ್ತಾಪೂರ:ಫೆ.25: ಸಾಹಿತ್ಯ ಪ್ರತಿಯೊಬ್ಬರಲ್ಲಿ ಹಾಸು ಹೊಕ್ಕಾಗಿದೆ ಸಾಹಿತ್ಯ ಇಲ್ಲದೆ ಮನುಷ್ಯನ ಬದುಕು ವ್ಯರ್ಥ. ಆದ್ದರಿಂದ ಎಲ್ಲಾ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮೂಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನುರ್ ಹೇಳಿದರು.
ತಾಲೂಕಿನ ಕರದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಹುಟ್ಟಿದಾಗಿನಿಂದ ಅನಾದಿಕಾಲದಿಂದಲೂ ಸಾಹಿತ್ಯ ಮನುಷ್ಯನ ಜೊತೆ ಜೊತೆಯಾಗಿ ಬಂದಿದೆ. ಹುಟ್ಟಿದ ಮಗುವಿಗೆ ತಾಯಿ ಹಾಡಿದ ಲಾಲಿ ಪದದಿಂದ ಸಾಹಿತ್ಯ ಪ್ರಾರಂಭವಾಗಿ ಹಾಗೆ ಜನಪದದ ಮೂಲಕ ಸಾಹಿತ್ಯ ಬೆಳೆಯಿತು.
ಮೊಬೈಲ್‍ಗಳಲ್ಲಿ ಬರುವ ಮಾಹಿತಿಗಳು ಗಂಭೀರ ಸ್ವರೂಪದ್ದಲ್ಲ. ಅವುಗಳನ್ನು ನೋಡಿ ಬಿಡುವ ಸ್ಥಿತಿ ಇರುತ್ತದೆ. ಆದರೆ ಗ್ರಂಥಾಲಯಗಳು ಹಾಗಲ್ಲ, ಅಲ್ಲಿ ನಮ್ಮ ಜೀವನಕ್ಕೆ ಬೇಕಾದ ಮಾರ್ಗದರ್ಶನ ಇರುತ್ತದೆ, ಅನುಭವ ಕಥನ ಇರುತ್ತದೆ, ಸಾಧಕರ ಸಾಧನೆಯ ಪರಿಚಯ ಇರುತ್ತದೆ. ಇದೆಲ್ಲವೂ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ. ಶಿಕ್ಷಕರು ಸಹ ಮಕ್ಕಳಿಗೆ ಇಂತಹ ಉಪಯುಕ್ತ ಪುಸ್ತಕಗಳನ್ನು ಓದುವುದಕ್ಕೆ ಪ್ರೇರಣೆ ಮಾಡಬೇಕು. ಮಕ್ಕಳ ಸಾಹಿತ್ಯ ಸಂಭ್ರಮ ಇಂತಹ ಪ್ರಯತ್ನದ ಫಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ’ ಎಂದರು.
ಸಾತನೂರು, ಅಳ್ಳೊಳ್ಳಿ ಹಾಗೂ ಕರದಾಳ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೂರಕ್ಕೂ ಅಧಿಕ ಶಾಲಾ ಮಕ್ಕಳನ್ನು ಮೂರು/ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಕತೆ, ಕವನ, ನಾಟಕ ಮತ್ತು ವರದಿಗಾರಿಕೆ ಮಾಡಿಸುವುದು ಸಾಹಿತ್ಯ ಸಂಭ್ರಮದ ಸ್ಥೂಲ ನೋಟ. ಸುಮಾರು 10ಕ್ಕೂ ಅಧಿಕ ಮಂದಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಬಹುತೇಕ ವಿದ್ಯಾರ್ಥಿಗಳ ಸೃಜನಶೀಲತೆಗೇ ಇಲ್ಲಿ ಆದ್ಯತೆ ಇರುತ್ತದೆ. ಮೂರು ದಿನಗಳಲ್ಲಿ ಹಲವು ಕತೆ, ಕವನ, ನಾಟಕಗಳು ರಚನೆಗೊಳ್ಳಲಿದ್ದು, ಹೊರಗಡೆ ಕರೆದೊಯ್ಯುವ ವಿದ್ಯಾರ್ಥಿಗಳು ವರದಿಗಾರಿಕೆ ಮಾಡಿ ತೋರಿಸಲಿದ್ದಾರೆ. ಕೊನೆಯಲ್ಲಿ ಇವುಗಳ ಮೌಲ್ಯಮಾಪನವೂ ನಡೆಯಲಿದೆ ಈ ಸಾಹಿತ್ಯ ಸಂಭ್ರಮದಲ್ಲಿ ಎಂದರು.
ಈ ಸಂದರ್ಭದಲ್ಲಿ ಅಯ್ಯಣ್ಣಗೌಡ ಪಾಟೀಲ್, ಶ್ರೀಮತಿ ಸುನಿತಾ ಬಿ, ನೀಲಕಂಠ ಸಾಹುಕಾರ, ಭೀಮರತ ತಳವಾರ್, ಯಾಲ್ಲಾಲಿಂಗ ಪೂಜಾರಿ, ನರಸಪ್ಪ ಬಾನರ್, ಗುರಲಿಂಗಯ್ಯ ಸ್ವಾಮಿ, ಗುರುನಾಥ್ ಹೀರೆಗೌಡ, ನಾಗಯ್ಯ ಸ್ವಾಮಿ, ಪಿಡಿಒಗಳಾದ ದೇವಿಂದ್ರ ಬಾಲಕೆ, ಬಸವರಾಜ ರಾಜೋಳ್ಳ, ಸಂಗೀತ, ಅಧಿಕಾರಿಗಳಾದ ಬಸವರಾಜ ಬಳೊಂಡಗಿ, ಶಿವಾನಂದ ನಾಲವಾರ, ಅಬ್ದುಲ್ ಸಲಿಂ, ರಮೇಶ್, ಪ್ರಕಾಶ್ ನಾಯ್ಕೊಡಿ, ಶಿವಲಿಂಗಪ್ಪ ಹೆಬ್ಬಾಳ, ರವಿಚಂದ್ರ ಅತನೂರ, ಪಂಡಿತ್ ನೆಲ್ಲೂಗಿ, ಶಿಕ್ಷಕರಾದ ಉದಯಕುಮಾರ್, ಅರುಣ್ಣಾಪ್ಪ, ಶ್ರೀಮತಿ ಪದ್ಮಾವತಿ, ಅಮಂನಾಥ, ಶ್ರೀಮತಿ ಲಾತಾ, ಕಾರ್ಯಕ್ರಮದ ನಿರೂಪಣೆಯನ್ನು ಶಾಲೆ ಶಿಕ್ಷಕಿ ಶ್ರೀಮತಿ ಜಯಶಿಲಾ, ನಡೆಸಿದರು ಪ್ರಾರ್ಥನಾ ಗೀತೆಯನ್ನು ಪಾರ್ವತಿ ವಿದ್ಯಾರ್ಥಿನಿ ಹಾಡಿದಳು. ವಂದನಾರ್ಪಣೆಯನ್ನು ಸಿಆರ್ ಸಿ ವಿಶ್ವನಾಥ್ ಸಾಸಟ್ಟಿ ನೆರವೇರಿಸಿದರು.